ಕಲ್ಲಿದ್ದಲು ಕಳ್ಳತನ: ಜೆಎಂಎಂ ಶಾಸಕನಿಗೆ ಮೂರು ವರ್ಷ ಜೈಲು
ರಾಮ್ಗಡ್,ಫೆ.1: ಕಲ್ಲಿದ್ದಲು ಕಳ್ಳತನ ಆರೋಪದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕ ಯೋಗೇಂದ್ರ ಪ್ರಸಾದ್ ಮಹ್ತೊ ಹಾಗೂ ಇತರ ನಾಲ್ವರಿಗೆ ಮೂರು ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಜಾರ್ಖಂಡ್ ನ್ಯಾಯಾಲಯ ಆದೇಶ ನೀಡಿದೆ.
2010ರಲ್ಲಿ ನಡೆದ ಪ್ರಕರಣದ ವಿಚಾರಣೆ ನಡೆಸಿದ ರಾಮ್ಗಡ್ ಉಪ-ವಿಭಾಗೀಯ ನ್ಯಾಯಾಧೀಶರಾದ ಆರ್.ಪಿ ಮಾಲಾ ಅವರು ಜೆ.ಎಂ.ಎಂ ಶಾಸಕ ಹಾಗೂ ಇತರರು ದೋಷಿಗಳೆಂದು ತೀರ್ಪು ನೀಡಿದರು. ಆರೋಪಿಗಳ ಮೇಲೆ 5,000 ರೂ. ದಂಡವನ್ನೂ ವಿಧಿಸಲಾಗಿದೆ.
ದಂಡ ಪಾವತಿಸಲು ವಿಫಲವಾದಲ್ಲಿ ಮೂರು ತಿಂಗಳು ಹೆಚ್ಚಿನ ಜೈಲುವಾಸವನ್ನು ಅನುಭವಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಶಿಕ್ಷೆಯನ್ನು ಪ್ರಕಟಿಸಿದ ನಂತರ ಶಾಸಕರ ಪರ ವಾದಿಸಿದ ವಕೀಲರು, ತಾವು ಉನ್ನತ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸಲಿದ್ದೇವೆ. ಹಾಗಾಗಿ ನಮ್ಮ ಕಕ್ಷೀದಾರರಿಗೆ ಜಾಮೀನು ಮಂಜೂರು ಮಾಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದರು.
ಶಾಸಕರಿಗೆ ಒಂದು ತಿಂಗಳ ಅವಧಿಯ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು ಸಾಮಾನ್ಯ ಜಾಮೀನು ಪಡೆಯಲು ಉನ್ನತ ನ್ಯಾಯಾಲಯದಲ್ಲಿ ಮನವಿ ಮಾಡುವಂತೆ ಸೂಚಿಸಿದರು.