×
Ad

ಕಾರ್ಪೊರೇಟ್ ತೆರಿಗೆ ಕಡಿತದಲ್ಲಿ ದೊಡ್ಡ ಕಂಪೆನಿಗಳಿಗೆ ನಿರಾಶೆ

Update: 2018-02-01 21:06 IST

ಹೊಸದಿಲ್ಲಿ,ಫೆ.1: ವಿತ್ತಸಚಿವ ಅರುಣ್ ಜೇಟ್ಲಿ ಅವರು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ)ಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇ.25ಕ್ಕೆ ತಗ್ಗಿಸುವ ಮೂಲಕ ಉದಾರತೆಯನ್ನು ಮೆರೆದಿದ್ದಾರೆ. ಆದರೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಈ ಕೊಡುಗೆಯಿಂದ ವಂಚಿತವಾಗಿವೆ. ಕಾರ್ಪೊರೇಟ್ ತೆರಿಗೆಯನ್ನು ಶೇ.25ಕ್ಕೆ ತಗ್ಗಿಸುವುದಾಗಿ ಜೇಟ್ಲಿಯವರು ಈ ಹಿಂದೆ ನೀಡಿದ್ದ ಭರವಸೆಗನುಗುಣವಾಗಿ ಮುಂಗಡಪತ್ರದಲ್ಲಿ ಇದನ್ನು ಎಲ್ಲ ವರ್ಗಗಳ ಉದ್ಯಮಗಳಿಗೂ ಪ್ರಕಟಿಸುವ ನಿರೀಕ್ಷೆಯನ್ನು ಅವು ಹೊಂದಿದ್ದವು.

ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತದಿಂದ ಸಮಗ್ರ ಎಂಎಸ್‌ಎಂಇ ಕ್ಷೇತ್ರಕ್ಕೆ ಲಾಭವಾಗಲಿದ್ದು, ತೆರಿಗೆ ರಿಟರ್ನ್ ಸಲ್ಲಿಸುತ್ತಿರುವ ಕಂಪನಿಗಳಲ್ಲಿ ಇವುಗಳ ಸಂಖ್ಯೆ ಶೇ.96(667,000ಕ್ಕೂ ಹೆಚ್ಚು)ರಷ್ಟಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿದ ಜೇಟ್ಲಿ, ಇದರಿಂದ ಸರಕಾರಕ್ಕೆ 7,200 ಕೋ.ರೂ.ಗಳ ಆದಾಯ ನಷ್ಟವಾಗಲಿದೆ ಎಂದರು.

ಆದಾಯ ತೆರಿಗೆ ಇಲಾಖೆ ಮತ್ತು ತೆರಿಗೆದಾರರ ಮುಖಾಮುಖಿಯನ್ನು ಕನಿಷ್ಠಗೊಳಿಸುವ ಉದ್ದೇಶದಿಂದ 2018-19ನೇ ಸಾಲಿನಿಂದ ಇ-ಅಸೆಸ್‌ಮೆಂಟ್ ಅನ್ನೂ ಸರಕಾರವು ಪ್ರಕಟಿಸಿದೆ.

 ಶೇರು ಮಾರುಕಟ್ಟೆಯಲ್ಲಿ ಒಂದು ಲಕ್ಷ ರೂ.ಗೂ ಹೆಚ್ಚಿನ ದೀರ್ಘಾವಧಿ ಬಂಡವಾಳ ಗಳಿಕೆಯ ಮೇಲೆ ಶೇ.10ರಷ್ಟು ತೆರಿಗೆಯನ್ನೂ ಮುಂಗಡಪತ್ರದಲ್ಲಿ ಘೋಷಿಸಲಾಗಿದೆ. 2018,ಜನವರಿ 31ರವರೆಗಿನ ಇಂತಹ ಲಾಭಕ್ಕೆ ಈ ತೆರಿಗೆಯಿಂದ ರಕ್ಷಣೆ ನೀಡಲಾಗಿದೆ.

250 ಕೋ.ರೂ.ವರೆಗೆ ವಹಿವಾಟು ಹೊಂದಿರುವ ಕಂಪನಿಗಳಿಗೆ ಮಾತ್ರ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿರುವುದು ನಿರಾಶಾದಾಯಕ ಎಂದು ಪಿಡಬ್ಲ್ಯೂಸಿ ಇಂಡಿಯಾದ ಅಭಿಷೇಕ ಗೋಯೆಂಕಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News