×
Ad

ಬಜೆಟ್-2018: ನಿಮಗೆ ಗೊತ್ತಿರಬೇಕಾದ 4 ಆದಾಯ ತೆರಿಗೆ ಬದಲಾವಣೆಗಳು

Update: 2018-02-01 21:59 IST

ಹೊಸದಿಲ್ಲಿ,ಫೆ.1: ವಿತ್ತಸಚಿವ ಅರುಣ್ ಜೇಟ್ಲಿಯವರು ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಮುಂಗಡಪತ್ರದಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ ಅಥವಾ ವಿವಿಧ ಸ್ಲಾಬ್‌ಗಳಿಗೆ ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದರೆ ನಿಮ್ಮ ಆದಾಯ ತೆರಿಗೆಯ ಮೇಲೆ ಪರಿಣಾಮವನ್ನು ಬೀರುವ ಹಲವಾರು ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಶೇರುಗಳು ಮತ್ತು ಈಕ್ವಿಟಿ ಮ್ಯೂಚ್ಯುವಲ್ ಫಂಡ್‌ಗಳಲ್ಲಿಯ ಹೂಡಿಕೆಗಳ ಮೇಲಿನ ದೀರ್ಘಾವಧಿ ಬಂಡವಾಳ ಗಳಿಕೆಯನ್ನು ತೆರಿಗೆ ವ್ಯಾಪ್ತಿಗೆ ತರುವುದರಿಂದ ಹಿಡಿದು ಆದಾಯ ತೆರಿಗೆಯ ಮೇಲಿನ ಸೆಸ್‌ನಲ್ಲಿ ಪರಿಷ್ಕರಣೆ ಯವರೆಗೆ ಹಲವಾರು ಬದಲಾವಣೆಗಳನ್ನು ಅವರು ಸೂಚಿಸಿದ್ದಾರೆ.

ಅವರು ಪ್ರಸ್ತಾಪಿಸಿರುವ 4 ಬದಲಾವಣೆಗಳು ಇಲ್ಲಿವೆ

►ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯ ಮೇಲಿನ ಸೆಸ್ ಈಗಿನ ಶೇ.3ರಿಂದ ಶೇ.4ಕ್ಕೆ ಏರಿಕೆ. ಇದು ವ್ಯಕ್ತಿಗತ ಆದಾಯ ತೆರಿಗೆಯನ್ನು ಹೆಚ್ಚಿಸಲಿದೆ.

►ವೇತನದಾರ ವರ್ಗಕ್ಕೆ ವಾರ್ಷಿಕ 40,000 ರೂ.ಗಳ ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಪ್ರಕಟಿಸಲಾಗಿದೆ. ಸುಮಾರು 2.5 ಕೋಟಿ ವೇತನದಾರರು ಮತ್ತು ಪಿಂಚಣಿದಾರರು ಇದರ ಲಾಭ ಪಡೆಯಲಿದ್ದು, ಸರಕಾರಕ್ಕೆ ವಾರ್ಷಿಕ 8,000 ಕೋ.ರೂ.ಆದಾಯ ನಷ್ಟವಾಗಲಿದೆ. ಪ್ರಯಾಣ ಭತ್ಯೆ ಮತ್ತು ಇತರ ವೈದ್ಯಕೀಯ ವೆಚ್ಚ ಮರುಪಾವತಿಯ ಮೇಲೆ ಈಗಿರುವ ತೆರಿಗೆ ವಿನಾಯಿತಿಯ ಬದಲಾಗಿ ಈ ಕೊಡುಗೆಯನ್ನು ನೀಡಲಾಗಿದೆ.

►ಶೇರು ಮಾರುಕಟ್ಟೆ ಮತ್ತು ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹೂಡಿಕೆಗಳಿಂದ ಒಂದು ಲಕ್ಷ ರೂ.ಗೂ ಹೆಚ್ಚಿನ ದೀರ್ಘಾವಧಿ ಬಂಡವಾಳ ಗಳಿಕೆಯ ಮೇಲೆ ಹೊಸದಾಗಿ ಶೇ.10 ತೆರಿಗೆಯನ್ನು ವಿಧಿಸಲಾಗಿದೆ. ಸದ್ಯ ಶೇರುಗಳು ಮತ್ತು ಮ್ಯೂಚ್ಯುವಲ್ ಫಂಡ್‌ಗಳಲ್ಲಿ 12 ತಿಂಗಳಿಗೂ ಹೆಚ್ಚಿನ ಅವಧಿಯ ಹೂಡಿಕೆಗಳು ತೆರಿಗೆ ವಿನಾಯಿತಿಯನ್ನು ಪಡೆದಿದ್ದವು. ಆದರೆ 2018,ಜ.31ರವರೆಗಿನ ಹೂಡಿಕೆಗಳಿಗೆ ಈ ತೆರಿಗೆಯು ಅನ್ವಯಿಸುವುದಿಲ್ಲ. ಈಕ್ವಿಟಿ ಮ್ಯೂಚ್ಯುವಲ್ ಫಂಡ್‌ಗಳು ಹೂಡಿಕೆದಾರರಿಗೆ ವಿತರಿಸುವ ಆದಾಯದ ಮೇಲೂ ಶೇ.10 ತೆರಿಗೆಯನ್ನು ಮುಂಗಡಪತ್ರದಲ್ಲಿ ಪ್ರಸ್ತಾವಿಸಲಾಗಿದೆ.

►ಹಿರಿಯ ನಾಗರಿಕರ ತೆರಿಗೆ ಹೊರೆಯನ್ನು ಹಗುರವಾಗಿಸಲು ನೆರವಾಗುವ ಹಲವಾರು ಕ್ರಮಗಳನ್ನು ಸರಕಾರವು ಪ್ರಕಟಿಸಿದೆ. ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿನ ಠೇವಣಿಗಳ ಮೇಲೆ ಅವರು ಪಡೆಯುವ ಬಡ್ಡಿ ಆದಾಯದ ಮೇಲಿನ ವಾರ್ಷಿಕ 10,000 ರೂ.ಗಳ ತೆರಿಗೆ ವಿನಾಯಿತಿಯನ್ನು 50,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಆದಾಯ ತೆರಿಗೆ ಕಾಯ್ದೆಯ 80ಡಿ ಸೆಕ್ಷನ್‌ನಡಿ ಆರೋಗ್ಯ ವಿಮೆ ಪ್ರೀಮಿಯಂ ಮತ್ತು/ಅಥವಾ ವ್ಯೆದ್ಯಕೀಯ ವೆಚ್ಚದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 30,000 ರೂ.ಗಳಿಂದ 50,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ 194ಎ ಸೆಕ್ಷನ್‌ನಡಿ ಮೂಲದಲ್ಲಿಯೇ ತೆರಿಗೆಯನ್ನು ಕಡಿತ ಮಾಡಬೇಕಾಗಿಲ್ಲ ಮತ್ತು ಎಲ್ಲ ನಿರಖು ಠೇವಣಿಗಳು ಮತ್ತು ಆವರ್ತ ಠೇವಣಿಗಳ ಮೇಲಿನ ಬಡ್ಡಿಗೆ ಈ ಲಾಭ ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News