ಫೆ. 8ರಿಂದ ಅನಿರ್ದಿಷ್ಟಾವಧಿ ಮುಷ್ಕರ: ಅಕ್ಷರದಾಸೋಹ ನೌಕರರ ಸಂಘ
ಮಂಗಳೂರು, ಫೆ. 1: ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.8ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಸಿಐಟಿಯು ಕರೆ ನೀಡಿದೆ.
ಅಂದು ಬೆಂಗಳೂರು ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಸತ್ಯಾಗ್ರಹವನ್ನು ಹ್ಮುಕೊಳ್ಳಲಾಗಿದ್ದು, ಮರುದಿನ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ದ.ಕ.ಜಿಲ್ಲಾ ಸಮಿತಿಯ ಪ್ರಕಟನೆ ತಿಳಿಸಿದೆ.
ಬಿಸಿಯೂಟ ಯೋಜನೆಯಡಿಯಲ್ಲಿ ನೌಕರರು ಕಳೆದ 16 ವರ್ಷಗಳಿಂದ ನಿಷ್ಠೆಯಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ಈ ನೌಕರರ ಬೇಡಿಕೆಗಳ ಬಗ್ಗೆ ಹಲವಾರು ಬಾರಿ ಸರಕಾರಕ್ಕೆ ಮನವರಿಕೆ ಮಾಡಿದ್ದೆವೆ. ರಾಜ್ಯ ಸರಕಾರವು 2017 ರಲ್ಲಿ ಎರಡು ಬಾರಿ ಸಂಘಟನೆಯ ಮುಖಂಡರೊಂದಿಗೆ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಮಾತುಕತೆ ನಡೆಸಿತ್ತು. ಮಾತುಕತೆಯ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನಿಡಿತ್ತು. ಆದರೆ ರಾಜ್ಯಸರಕಾರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಕನಿಷ್ಠ ಕೂಲಿ ವ್ಯಾಪ್ತಿಗೆ ತರದೆ ಈ ಕಾರ್ಮಿಕರನ್ನು ದುಡಿಸುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.