ಮಂಗಳೂರು: ಅಂತಾರಾಜ್ಯ ಕುಖ್ಯಾತ ರೌಡಿ ಸೆರೆ
ಮಂಗಳೂರು, ಫೆ. 1: ಅಂತಾರಾಜ್ಯ ಕುಖ್ಯಾತ ರೌಡಿಯೊಬ್ಬನನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿಗಳು ಬಂಧಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.
ಕಾಸರಗೊಡು ಜಿಲ್ಲೆಯ ಉಪ್ಪಳ ನಿವಾಸಿ ಮುಹಮ್ಮದ್ ರಪೀಕ್ ಯಾನೆ ನಪ್ಪಾಟೆ ರಫೀಕ್ (29)ಬಂಧಿತ ಆರೋಪಿ.
ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ಆರೋಪಿಯನ್ನು ಕೆ.ಸಿ.ರೋಡ್‌ನಲ್ಲಿ ಬಂಧಿಸಲಾಗಿದೆ.
ಈತನ ವಿರುದ್ಧ ಸೊಮೇಶ್ವರ ಗ್ರಾಮದ ಕುತ್ತಾರು ಪದವಿನ ಅಪಾರ್ಟ್‌ಮೆಂಟಿನ ಫ್ಲಾಟಿಗೆ ತನ್ನ ಸಹಚರರೊಂದಿಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈತನ ವಿರುದ್ಧ ಮೂರು ಕೊಲೆ ಪ್ರಕರಣ ಹಾಗೂ ಕೊಲೆ ಯತ್ನ, ಕಿಡ್ನಾಪ್ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಪುತ್ತೂರು ನಗರ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಸ್ತಗಿರಿ ವಾರೆಂಟ್ ಬಾಕಿ ಇದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಎ.ಸಿ.ಪಿ. ಮತ್ತು ಉಳ್ಳಾಲ ಠಾಣಾ ಪಿ.ಐ. ಹಾಗೂ ರೌಡಿ ನಿಗ್ರಹ ದಳದ ಸಿಬ್ಬಂದಿ ಭಾಗವಹಿಸಿದ್ದರು.