×
Ad

ಪತ್ನಿಗೆ ಹಲ್ಲೆಗೈದು, ಕೊಲೆಯತ್ನ: ಆರೋಪಿ ಪತಿಗೆ ಶೋಧ

Update: 2018-02-01 22:27 IST

ಅಜೆಕಾರು, ಫೆ.1: ಪತ್ನಿಯೊಂದಿಗೆ ಜಗಳವಾಡಿದ ಪತಿ ಆಕೆಯ ಕೈ ಮತ್ತು ಕಾಲುಗಳನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಅಜೆಕಾರು ಸಮೀಪದ ಹೆರ್ಮುಂಡೆ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹಲ್ಲೆಗೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿರುವ  ಕರ್ಜಿಪಲ್ಕೆಯ ಶ್ರೀಧರ್ ಪೂಜಾರಿ ಮತ್ತು ಸುಗುಣ ದಂಪತಿಯ ಪುತ್ರಿ ಅನುಶ್ರೀ (23) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಪತಿ ಹೆರ್ಮುಂಡೆಯ ಪಟ್ರಬೆಟ್ಟು ನಿವಾಸಿ ಸಂತೋಷ್ ಪೂಜಾರಿ (27)ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆರು ವರ್ಷಗಳಿಂದ ಅನುಶ್ರೀಯನ್ನು ಪ್ರೀತಿಸಿದ ಅವರ ದೂರದ ಸಂಬಂಧಿ ಸಂತೋಷ್ 2017 ಮಾ.23ರಂದು ಒತ್ತಾಯ ಪೂರ್ವಕವಾಗಿ ಮನೆಯವರನ್ನು ಬೆದರಿಸಿ ಆಕೆಯನ್ನು ಮದುವೆಯಾಗಿದ್ದನು. ಮುಂಬೈಯಲ್ಲಿ ಉದ್ಯೋಗಿಯಾಗಿದ್ದ ಸಂತೋಷ್ ನಂತರ ಪತ್ನಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಇವರ ಮಧ್ಯೆ ಪ್ರತಿದಿನ ಜಗಳ ನಡೆಯುತ್ತಿತ್ತೆನ್ನಲಾಗಿದೆ.

ಇದೇ ಕಾರಣಕ್ಕೆ ನಾಲ್ಕು ತಿಂಗಳ ಹಿಂದೆ ಅನುಶ್ರೀ ತಾಯಿ ಮುಂಬೈಗೆ ತೆರಳಿ ಮಗಳನ್ನು ಕರೆದುಕೊಂಡು ಬಂದಿದ್ದರು. ಎರಡು ತಿಂಗಳ ಹಿಂದೆ ಆಕೆ ಕಾರ್ಕಳ ಗುಂಡ್ಯಡ್ಕದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಜ. 27ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಅನುಶ್ರೀ ಮನೆ ಸಮೀಪದ ಸ್ವರ್ಣ ನದಿ ದಾಟುತ್ತಿದ್ದಾಗ ಹಿಂದಿನಿಂದ ಬಂದ ಸಂತೋಷ್, ಆಕೆಯನ್ನು ಹಿಡಿದು ಕತ್ತಿಯಿಂದ ಕೈ ಹಾಗೂ ಕಾಲುಗಳನ್ನು ಕಡಿದು ಪರಾರಿಯಾದನು ಎಂದು ದೂರಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News