ಭಟ್ಕಳ: ಭಾವೈಕ್ಯದ ಬೇರು ಗಟ್ಟಿಗೊಳಿಸುವಂತೆ ಜೆ.ಸಿ.ಐ ಕರೆ
ಭಟ್ಕಳ, ಫೆ. 1: ನಾವೆಲ್ಲರೂ ಭಾರತೀಯರೆಂಬ ನೆಲೆಯಲ್ಲಿ ಒಗ್ಗಟ್ಟಾಗಿ ದೇಶದಲ್ಲಿನ ಭಾವೈಕ್ಯತೆಯ ಬೇರುಗಳನ್ನು ಗಟ್ಟಿಗೊಳಿಸುವಂತೆ ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆಯ ಭಟ್ಕಳ ಉಪಾಧ್ಯಕ್ಷ ಡಾ. ನಸೀಮ್ ಖಾನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಗುರುವಾರ ಭಟ್ಕಳದ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ನ್ಯೂಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತೆ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಹಲವು ಧರ್ಮ, ಒಂದೇ ದೇಶ ಎಂಬ ಕಲ್ಪನೆಯಡಿ ನಾವೆಲ್ಲರೂ ಏಕತೆಯನ್ನು ಪ್ರದರ್ಶಿಸಬೇಕಾಗಿದೆ. ನಮ್ಮಿಂದಲೇ ಬದಲಾವಣೆಯಾಗಬೇಕಾಗಿದ್ದು ಇದ ಕ್ಕಾಗಿ ವಿದ್ಯಾರ್ಥಿಗಳು ಪಣತೊಡಬೇಕಾಗಿದೆ ಎಂದು ಕರೆ ನೀಡಿದ ಅವರು ನಮ್ಮಲ್ಲಿರುವ ಸಂಘರ್ಷವನ್ನು ತೊರೆದು ಪ್ರೀತಿ, ಪ್ರೇಮ, ಭಾವೈಕ್ಯತೆ, ಅನೋನ್ಯತೆ ಹಾಗೂ ಸಹಿಷ್ಣುತೆಯಿಂದ ಬದುಕಬೇಕು ಎಂದರು.
ಮುಖ್ಯಾದ್ಯಾಪಕ ಎಂ.ಆರ್. ಮಾನ್ವಿ ಮಾತನಾಡಿ, ಹಿಂದೂ-ಮುಸ್ಲಿಮರಲ್ಲಿನ ಪರಸ್ಪರ ಅಪನಂಬಿಕೆಗಳು ದೂರವಾಗಬೇಕು, ಒಬ್ಬರು ಇನ್ನೊಬ್ಬರನ್ನು ಅರಿತು ಬಾಳಿದಾಗ ಮಾತ್ರ ದೇಶ ಸುಭ್ರ ರಾಷ್ಟ್ರವಾಗಲು ಸಾಧ್ಯವೆಂದರು.
ಜೆಸಿಐ ಭಟ್ಕಳ ನಗರಾಧ್ಯಕ್ಷ ಅಬ್ದುಲ್ ಜಬ್ಬಾರ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪಾಧ್ಯಕ್ಷ ನಾಸೀರ್ ಹುಸೇನ್ ಜುಷದಿ, ಪ್ರಾಂಶುಪಾಲೆ ಫಹಮಿದಾ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.