ಬಜೆಟ್ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರಿಗೆ ಅಚ್ಚೇದಿನ್: ಎಸ್ ಡಿ ಪಿ ಐ
ಮಂಗಳೂರು, ಫೆ. 1: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಇಂದು ಪಾರ್ಲಿಮೆಂಟಿನಲ್ಲಿ ಮಂಡಿಸಿದ 2018-19 ನೇ ಸಾಲಿನ ಬಜೆಟ್ ನಲ್ಲಿ ಜನ ಸಾಮಾನ್ಯರನ್ನು ವಂಚಿಸಿ ಕೆಟ್ಟದಿನಗಳನ್ನು ಕೊಟ್ಟು ಕೇವಲ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನವನ್ನು ಶೇ.200 ರಷ್ಟು ಹೆಚ್ಚಿಸಿ ಅವರಿಗೆ ಮಾತ್ರ ಒಳ್ಳೆಯ ದಿನಗಳನ್ನು ನೀಡಿದ್ದಾರೆ ಎಂದು ಎಸ್ಡಿಪಿಐ ದ.ಕ. ಜಿಲ್ಲಾ ಪ್ರ. ಕಾರ್ಯದರ್ಶಿ ಎ.ಎಮ್. ಅಥಾವುಲ್ಲಾ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಈ ಬಾರಿಯ ಬಜೆಟ್ ನಲ್ಲಿ ಜನಸಾಮಾನ್ಯರು ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಅದೆಲ್ಲವೂ ಹುಸಿಯಾಗಿ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ನೋಟು ಅಮಾನ್ಯೀಕರಣ, ಜಿ ಎಸ್ ಟಿ, ಬೆಲೆ ಏರಿಕೆ, ಜನ ವಿರೋಧಿ ನೀತಿಗಳಿಂದ ತತ್ತರಿಸಿದ ಜನತೆಯನ್ನು ಮೇಲೆತ್ತಬೇಕಾದದ್ದು ಸರಕಾರದ ಕರ್ತವ್ಯವಾಗಿದ್ದು, ಅದಾವುದನ್ನು ಮಾಡದೇ ಕೇವಲ ಭರವಸೆಯ ಈಡೇರಿಸದ ಸುಳ್ಳುಗಳ ಬಜೆಟನ್ನು ಮಂಡಿಸಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದ ಬಗ್ಗೆ ಕೇಂದ್ರದ ಬಜೆಟ್ ನಲ್ಲಿ ಸರಿಯಾದ ಯಾವುದೇ ಯೋಜನೆಗಳನ್ನು ನೀಡದೇ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದಕ್ಕೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಉತ್ತರಿಸಲಿದ್ದಾರೆ. ಕೇಂದ್ರ ಸರಕಾರದ ಬಜೆಟ್ ಜನಸಾಮಾನ್ಯರಿಗೆ ಹೊರೆಯಾಗಿದೆ. ಎಲ್ಲಾ ಕ್ಷೇತ್ರ ವನ್ನು ನಿರ್ಲಕ್ಷಿಸಿದ ಬಜೆಟ್ ಆಗಿದೆ ಎಂದು ಎಸ್ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಎ.ಎಮ್ ಅಥಾವುಲ್ಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.