×
Ad

ಉಡುಪಿ: ಬಜೆಟ್‌ಗೆ ಪ್ರತಿಕ್ರಿಯೆಗಳು

Update: 2018-02-01 23:02 IST

ಉಡುಪಿ, ಫೆ. 1: ವ್ಯಕ್ತಿಗತ ಆದಾಯದ ತೆರಿಗೆ ವಿನಾಯಿತಿ ಮಿತಿಯ ಹೆಚ್ಚಳವಿಲ್ಲ. ಕೃಷಿಯ ಬಗ್ಗೆ ಹೆಚ್ಚಿನ ಒತ್ತು ನೀಡಿಲ್ಲ. ಸಂಸ್ಥೆಗಳ ನಗದು ವ್ಯವಹಾರವನ್ನು 10,000 ಕ್ಕೆ ಸೀಮಿತಗೊಳಿಸಿರುವುದು ಅಭಿವೃದ್ಧಿಗೆ ಮಾರಕ. ಶಿಕ್ಷಣದ ಮೇಲಿನ ಸೆಸ್ ಶೇ. 4ಕ್ಕೆ ಏರಿಕೆ ಉತ್ತೇಜನಕಾರಿಯಲ್ಲ. ಮಧ್ಯಮ ವರ್ಗದ ನಿರೀಕ್ಷೆ ಯನ್ನು ಹುಸಿಗೊಳಿಸಿದ ಕೇಂದ್ರ ಸರಕಾರದ ಈ ಬಜೆಟ್, ಕೇಂದ್ರದಲ್ಲಿ ಇರುವುದು ವ್ಯಾಪಾರಿ ಸರಕಾರ ಎಂಬುದನ್ನು ತೋರಿಸಿಕೊಟ್ಟಿದೆ

-ಭಾಸ್ಕರ್ ರಾವ್ ಕಿದಿಯೂರು, ಕಾಂಗ್ರೆಸ್ ವಕ್ತಾರ ಉಡುಪಿ.

 ಈ ಸಲದ ಕೇಂದ್ರ ಬಜೆಟ್ ರೈತರ ಹಾಗೂ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. 72 ಸಾವಿರ ಕೋಟಿ ಮಹಿಳಾ ಸೇವಾ ಸಂಘಗಳಿಗೆ ಸಾಲ ಸೌಲಭ್ಯ, ಉಜ್ಜಲಾ ಯೋಜನೆಯಡಿ 8 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಬಡ ಕುಟುಂಬಗಳಿಗೆ ಸೌಭಾಗ್ಯ ಯೋಜನೆಯಡಿ 4 ಕೋಟಿ ವಿದ್ಯುತ್ ಸಂಪರ್ಕ, 10 ಕೋಟಿ ಬಡ ಕುಟುಂಬಕ್ಕೆ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ. ಒಟ್ಟಿನಲ್ಲಿ ಗ್ರಾಮೀಣ ಭಾರತಕ್ಕೆ ಕೊಡುಗೆಗಳನ್ನು ನೀಡಿದ ಬಜೆಟ್ ಇದಾಗಿದೆ. ದೇಶದ ಪ್ರಗತಿಗೆ ಹೆಚ್ಚಿನ  ಪ್ರಾಮುಖ್ಯತೆಯನ್ನು ನೀಡಿದ ಬಜೆಟ್ ಇದು.

-ಕೆ.ಉದಯಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ.

 ಕೇಂದ್ರ ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಿದ ಬಜೆಟ್ ರಾಷ್ಟ್ರ ಕಟ್ಟುವ ದೂರಗಾಮಿ ಯೋಜನೆಯುಳ್ಳ ಬಜೆಟ್. ಗ್ರಾಮೀಣ ಪ್ರದೇಶದ ಪರಿಪೂರ್ಣ ಅಭಿವೃದ್ಧಿಗೆ ಬಜೆಟ್ ಒತ್ತು ನೀಡಿದೆ. ಸರ್ವರಿಗೂ ಸೂರು ಎಂಬ ಕಲ್ಪನೆಗೆ ಕಾಳಜಿ ವಹಿಸಿದ್ದು, ರಾಷ್ಟ್ರದಲ್ಲಿ ಬದುಕುವ ಬಡವರಿಗೆ ಕುಟುಂಬಕ್ಕೊಂದು ಮನೆ ಯೋಜನೆ ಅನುಷ್ಠಾನವಾಗಲಿದೆ. ದೇಶದ 10 ಕೋಟಿ ಕುಟುಂಬಗಳಿಗೆ ಅಂದರೆ, 50 ಕೋಟಿ ಬಡಜನರಿಗೆ ಆರೋಗ್ಯ ರಕ್ಷಣೆ ಕೇಂದ್ರ ಸರಕಾರದಿಂದ ಅನುಷ್ಠಾನ. ಅನಾರೋಗ್ಯ ಪೀಡಿತ ಬಡವರಿಗೆ 5 ಲಕ್ಷ ರೂ. ಆರೋಗ್ಯವಿಮೆ. ಬಜೆಟ್‌ನಲ್ಲಿ ಕರ್ನಾಟಕಕ್ಕೂ ಒತ್ತು, 17 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿಗೆ ಉಪನಗರ ರೈಲು ಯೋಜನೆ ನೀಡಲಾಗಿದೆ.

-ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ.

ಕೆಳ ವರ್ಗದ, ಮಧ್ಯಮ ವರ್ಗದ, ರೈತರ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಯುವ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದ ಬಜೆಟ್. ರೈತರ ಸಾಲ ಮನ್ನಾ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಈ ಸರಕಾರ ಉದ್ಯಮಪತಿಗಳ ಪರವಾಗಿದೆ ಎಂಬುದನ್ನು ಈ ಬಜೆಟ್ ಇನ್ನೊಮ್ಮೆ ಸಾಬೀತುಪಡಿಸುವ ಈ ಬಜೆಟ್ ಮಳೆಗಾಲದ ಪಟಾಕಿಯಂತಿದೆ.

-ಯೋಗೀಶ್ ಶೆಟ್ಟಿ, ಜಾತ್ಯತೀತ ಜನತಾದಳದ ಉಡುಪಿ ಜಿಲ್ಲಾಧ್ಯಕ್ಷ.

ಕ್ರಾಂತಿಕಾರಿ, ಅಭಿವೃದ್ಧಿಗೆ ಪೂರಕವಾದ ಜನಪ್ರಿಯ ಬಜೆಟ್. 70 ಲಕ್ಷ ಯುವಕರಿಗೆ ಹೊಸ ಉದ್ಯೋಗ, ಕೃಷಿಗೆ 11 ಲಕ್ಷ ಕೋಟಿ ರೂ., ಹೈನುಗಾರಿಕೆ, ಕೃಷಿ, ಮೀನುಗಾರಿಕೆಗೆ ಉತ್ತೇಜನ, 22 ಸಾವಿರ ಎಪಿಎಂಸಿಗಳ ಗುರುತಿಸಿ 11 ಲಕ್ಷ ಕೋಟಿ ರೂ. ಸಾಲದ ಗುರಿ, 4 ಕೋಟಿ ಜನರಿಗೆ ಉಚಿತ ವಿದ್ಯುತ್, 8 ಕೋಟಿ ಜನರಿಗೆ ಉಚಿತ ಎಲ್‌ಪಿಜಿ, ಬೆಂಗಳೂರಿಗೆ ಮೋನೋರೈಲು ನೀಡಿದ ಅತ್ಯುತ್ತಮ ಬಜೆಟ್ ಇದಾಗಿದೆ.

-ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಉಡುಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News