×
Ad

ಯುವಜನ ಮೇಳ ಯುವಕರಲ್ಲಿರುವ ಪ್ರತಿಭೆಗಳಿಗೆ ಪ್ರೇರಣೆ-ಮೀನಾಕ್ಷಿ ಶಾಂತಿಗೋಡು

Update: 2018-02-01 23:05 IST

ಪುತ್ತೂರು, ಫೆ. 1: ತುಳುನಾಡಿನ ಸಂಸ್ಕೃತಿಯ ಪರಂಪರೆಯನ್ನು ಒಳಗೊಂಡ ಕಲಾ ಪ್ರಕಾರಗಳು ಸೇರಿದಂತೆ ಬಹಳಷ್ಟು ಜನಪದ ಕಲೆಗಳನ್ನು ಜನತೆಯ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಯುವ ಸಮುದಾಯ ಮಾಡಬೇಕು. ಯುವಕರೇ ದೇಶದ ಬೆನ್ನೆಲುಬು ಆಗಿದ್ದು, ಯುವಕರಲ್ಲಿನ ಪ್ರತಿಭೆಗಳಿಗೆ ಪ್ರೇರಣೆ ನೀಡುವ ಕೆಲಸವು ಯುವಜನಮೇಳದಂತಹ ಕಾರ್ಯಕ್ರಮಗಳಿಂದ ನಡೆಯುತ್ತಿದೆ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.

ಅವರು ಜಿಲ್ಲಾಡಳಿತ, ದ.ಕ.ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲಾ ಮತ್ತು ರಾಜ್ಯ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ, ಮತ್ತು ಸುದಾನ ವಸತಿಯುತ ಶಾಲೆಯ ಸಹಯೋಗದಲ್ಲಿ ಸುದಾನ ವಸತಿಯುತ ಶಾಲೆಯ ವಠಾರದಲ್ಲಿ ನಡೆಯುತ್ತಿರುವ 4 ದಿನಗಳ ರಾಜ್ಯ ಮಟ್ಟದ ಯುವಜನ ಮೇಳವನ್ನು ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಯುವಕರು ದಾರಿ ತಪ್ಪಬಹುದಾದ ಸಮಯದಲ್ಲಿ ಅವರಿಗೊಂದು ಅಣೆಕಟ್ಟು ಕಟ್ಟಿ ಅವರನ್ನು ಸದಭಿರುಚಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಈ ಮೇಳಗಳು ಸಹಕಾರಿಯಾಗಿವೆ. ಯುವಕರೆಲ್ಲರೂ ತಪ್ಪು ದಾರಿಗಿಳಿಯುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು. ಕಲ್ಲು ಬಿಸಾಡಲು ಹೇಳುವವರು ಹಲವರಿರಬಹುದು. ಆದರೆ ಉತ್ತಮ ದಾರಿಯಲ್ಲಿ ಹೋಗಲು ಹೇಳುವವರು ಕೆಲವೇ ಮಂದಿ ಇರುತ್ತಾರೆ. ಅಂಥ ಕೆಲವೇ ಅವಕಾಶಗಳಲ್ಲಿ ಯುವಕ ಮಂಡಗಳು ಮತ್ತು ಅವುಗಳ ಮೂಲಕ ನಡೆಯುವ ಯುವಜನ ಮೇಳಗಳು ಸೇರಿವೆ. ಇಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ಮೂಡಿ ಬರಬೇಕು ಎಂದರು.

ಪ್ರತೀ ಗ್ರಾಮಗಳಲ್ಲಿ ಯುವಕ ಮಂಡಲ, ಯುವತಿ ಮಂಡಲಗಳಿಗೆ ಕನಿಷ್ಠ ಹತ್ತು ಸೆಂಟ್ಸ್‌ನಷ್ಟಾದರೂ ನಿವೇಶನ ಮೀಸಲಿಡುವಂತೆ ಯುವಕ ಯುವತಿ ಮಂಡಲಗಳೇ ಸರಕಾರಕ್ಕೆ ಮನವಿ ಸಲ್ಲಿಸಬೇಕು. ಹಾಗೊಂದು ವೇಳೆ ಮನವಿ ಬಂದರೆ ಸರಕಾರದ ಕಡೆಯಿಂದ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ನಾನು ಒತ್ತಡ ಹಾಕಲು ಸಾಧ್ಯ ಎಂದು ಹೇಳಿದರು.

‘ಯುವ ಸಂಗಮ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳಿಗೆ ಒಂದೇ ಸೂರಿನಡಿಗೆ ತಂದು ಪ್ರತಿಭೆಗಳನ್ನು ಅರಳಿಸುವ ಕೆಲಸಗಳು ಸಂಘಟನೆಗಳ ಮೂಲಕ ನಡೆಯಬೇಕು. ಯುವ ಜನತೆ ಸ್ವಚ್ಚ ಭಾರತ ಕಟ್ಟುವ ಕನಸು ನನಸಾಗಿಸುವ ಕೆಲಸಗಲಿಗೆ ಕೈಜೋಡಿಸಬೇಕು ಎಂದರು.

ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಮಾತನಾಡಿ ಇದಿಗ ಯುವಜನ ಮೇಳಗಳನ್ನು ಆಕರ್ಷಣೆಯಿಲ್ಲದೆ ಕಳೆಗುಂದಿದ್ದು, ಯುವಕರ ಆಕರ್ಷಣೆ ಹೆಚ್ಚಾಗಿ ಧಾರ್ಮಿಕ ಕಡೆಗೆ ಸಾಗುತ್ತಿರುವುದು ಬೇಸರದ ವಿಚಾರ, ಶಾಂತಿ ಸೌಹಾರ್ದತೆ ಬೆಸೆಯುವ, ಪ್ರೀತಿ ವಿಶ್ವಾಸ ಉಳಿಸುವ ಯುವಜನ ಮೇಳಗಳಂತಹ ಕಾರ್ಯಕ್ರಮಗಳ ಬಗ್ಗೆ ಯುವ ಜನತೆ ಆಕರ್ಷಿತವಾಗಬೇಕು. ನಾಡುಕಟ್ಟುವ ಮತ್ತು ಹೃದಯ ಕಟ್ಟುವ ಕೆಲಸದಲ್ಲಿ ಭಾಗಿಗಳಾಗಬೇಕು ಎಂದರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು, ಪುತ್ತೂರು ಉಪವಿಭಾಗಾಧಿಕಾರಿ ಡಾ. ಕೃಷ್ಣಮೂರ್ತಿ, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಾಲಾಜಿ, ಸುಧಾನ ಸಂಸ್ಥೆಯ ಸಂಚಾಲಕ ರೆ. ವಿಜಯ ಹಾರ್ವಿನ್ ಶುಭ ಹಾರೈಸಿದರು.

ರಾಜ್ಯ ಅರೆಬಾಷೆ ಅಕಾಡಮಿ ಅಧ್ಯಕ್ಷ ಪಿ.ಸಿ. ಜಯರಾಮ, ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ಪ್ರಮೀಳಾ ಜರ್ನಾರ್ಧನ್, ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಮಾಯ್ದೇ ದೇವುಸ್ ಚರ್ಚ್‌ನ ಧರ್ಮಗುರು ಆಲ್ಫ್ರೆಡ್ ಜೆ ಪಿಂಟೋ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ನಗರಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿ, ತಾ.ಪಂ. ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಉಷಾ ಅಂಚನ್, ಕ್ಷೇತ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎಸ್, ತಾ.ಪಂ. ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಶ್ರಿ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಸುದಾನ ಶಾಲೆಯ ಮುಖ್ಯಗುರು ಶೋಭಾ ನಾಗರಾಜ್, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ, ನಗರಸಭಾ ಸದಸ್ಯೆ ಝೊಹರಾ ನಿಸಾರ್ ಮತ್ತಿತರು ಉಪಸ್ಥಿತರಿದ್ದರು.

ಜಿಲ್ಲಾ ಯುವ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ’ಸೋಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಜೇಶ್ ಕಡೆಂಜಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News