ರಜೆ ನೀಡದ ಕಾರಣ: ಯುಎಇಯಲ್ಲಿ ಭಾರತೀಯ ಮಾಲಕನ ಮೇಲೆ ಬಾಂಗ್ಲಾದೇಶಿಗನಿಂದ ಹಲ್ಲೆ

Update: 2018-02-01 18:04 GMT

ದುಬೈ, ಫೆ.1: ರಜೆಯನ್ನು ರದ್ದುಗೊಳಿಸಿದ ಕಾರಣಕ್ಕಾಗಿ ಯುಎಇಯಲ್ಲಿ ಭಾರತೀಯ ಮೂಲದ ತನ್ನ ಮಾಲಕನ ಮೇಲೆ ಹಲ್ಲೆ ನಡೆಸಿ ಆತ ಭಾಗಶಃ ಅಂಗ ಊನವಾಗುವಂತೆ ಮಾಡಿದ ಆರೋಪದಲ್ಲಿ ಬಾಂಗ್ಲಾದೇಶಿ ಪ್ರಜೆಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 35ರ ಹರೆಯದ ಆರೋಪಿಯು ತನ್ನ ಭಾರತೀಯ ಮೇಲ್ವಿಚಾರಕರಲ್ಲಿ ರಜೆಗಾಗಿ ಅರ್ಜಿ ಹಾಕಿದ್ದ. ಮೇಲ್ವಿಚಾರಕ ಮೊದಲಿಗೆ ರಜೆಯನ್ನು ನೀಡಿದ್ದರೂ ನಂತರ ಅದನ್ನು ರದ್ದು ಮಾಡಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಆದರೆ ನಂತರ ಮೇಲ್ವಿಚಾರಕ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿದಾಗ ಆರೋಪಿ ಕಾರ್ಮಿಕ ಅಲ್ಲಿಂದ ನಾಪತ್ತೆಯಾಗಿರುವುದು ತಿಳಿಯಿತು. ಕೂಡಲೇ ಈ ಬಗ್ಗೆ ಮೇಲ್ವಿಚಾರಕ ಸಂಸ್ಥೆಯ ವ್ಯವಸ್ಥಾಪಕರಿಗೆ ವಿಷಯ ತಿಳಿಸಿದಾಗ ಅವರು ಆರೋಪಿ ಕಾರ್ಮಿಕನ ಮೂರು ದಿನದ ಸಂಬಳವನ್ನು ಕಡಿತಗೊಳಿಸಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

ಇದರಿಂದ ಕುಪಿತನಾದ ಕಾರ್ಮಿಕ ದೊಣ್ಣೆಯಿಂದ ಮೇಲ್ವಿಚಾರಕನ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಇತರ ಕಾರ್ಮಿಕರು ಮಧ್ಯಪ್ರವೇಶಿಸಿ ಮೇಲ್ವಿಚಾರಕನನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News