×
Ad

ರಾಜ್ಯ ದಾರಿಮಿ ಉಲಮಾ ಒಕ್ಕೂಟದಿಂದ ಮುಖ್ಯಮಂತ್ರಿ ಭೇಟಿ

Update: 2018-02-02 23:13 IST

ಪುತ್ತೂರು, ಫೆ. 2: ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಮತ್ತು ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಸಮಿತಿ ಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಕರಾವಳಿಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ಕ್ರಮ ವಹಿಸಬೇಕು ಮತ್ತು ಅಶಾಂತಿ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ನೀಡಿ ಆಗ್ರಹಿಸಿದರು.

ಕರಾವಳಿಯಲ್ಲಿ ನಿರಂತರವಾಗಿ ಹತ್ಯೆಗಳು, ಹತ್ಯಾ ಯತ್ನಗಳು ನಡೆಯುತ್ತಿದ್ದು, ನಾಗರಿಕರಲ್ಲಿ ಭಯದ ವಾತಾವತಣ ಸೃಷ್ಠಿಸಿದೆ, ರಾಜಕೀಯ ಧ್ವೇಷ ಸಾಧಿಸುವ ಪ್ರಕರಣಗಳು ನಡೆಯುತ್ತಿದೆ, ಡ್ರಗ್ಸ್ ಮಾಫಿಯಾ ಜಿಲ್ಲೆಯಲ್ಲಿ ತನ್ನ ಕದಂಭ ಬಾಹುವನ್ನು ವಿಸ್ತರಿಸಿದ್ದು ಅಮಲು ಪದಾರ್ಥಗಳು ಎಗ್ಗಿಲ್ಲದೇ ಲಭಿಸುತ್ತಿರುವ ಪರಿಣಾಮವಾಗಿ ಹಲವು ಅಹಿತಕರ ಘಟನೆಗಳು ನಡೆಯುತ್ತಿದೆ. ಈ ಎಲ್ಲಾ ವಿಚಾರಗಳಿಂದಾಗಿ ಜಿಲ್ಲೆಯಲ್ಲಿ ಜನರು ಭಯದ ವಾತಾವರಣದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬಂದೊದಗಿದ್ದು, ಅಭದ್ರತೆಯ ವಾತಾವರಣ ಜನರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ತಾವುಗಳು ಇಲಾಖೆಯಲ್ಲಿ ಬದಲಾವಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.

ನಿಯೋಗದಲ್ಲಿ ದಾರಿಮಿ ಒಕ್ಕೂಟದ ಅಧ್ಯಕ್ಷ ಎಸ್.ಬಿ ಮುಹಮ್ಮದ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಖಜಾಂಜಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಉಪಸ್ಥಿತರಿದ್ದರು.

ಜ.26ರಂದು ಗಣರಾಜ್ಯೋತ್ಸವದ ಅಂಗವಾಗಿ ‘ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ’ ಎಂಬ ಧ್ಯೇಯ ವಾಕ್ಯದಡಿ ಎಸ್ಕೆಎಸ್ಸೆಸ್ಸೆಫ್ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿಯನ್ನು ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳಿಗೆ ನೀಡಲಾಗಿದೆ ಎಂದು ದಾರಿಮಿ ಉಲಮಾ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News