ಪುತ್ತೂರಿನಲ್ಲಿ ರಾಜ್ಯ ಮಟ್ಟದ ಯುವಜನ ಮೇಳ

Update: 2018-02-02 17:53 GMT

ಪುತ್ತೂರು, ಫೆ. 2: ಪುತ್ತೂರಿನ ಸುದಾನ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಯುವಜನ ಮೇಳ ಅಚ್ಚುಕಟ್ಟಾದ ಅದ್ಧೂರಿ ವ್ಯವಸ್ಥೆ ಗಳೊಂದಿಗೆ ಮೂಡಿಬಂದು ಜನತೆಯ ಪ್ರಶಂಸೆಗೆ ಪಾತ್ರವಾಗಿದೆ. ಶುಕ್ರವಾರ ನಡೆದ ಸ್ಪರ್ಧೆಗಳಲ್ಲಿ ಹಲವು ತಂಡಗಳು ನೀಡಿದ ಪ್ರದರ್ಶನಗಳು ಪ್ರೇಕ್ಷಕರ ಮನ ತಣಿಸಿತು.

ಜಿಲ್ಲಾ ಆಡಳಿತ, ದ.ಕ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲಾ ಮತ್ತು ರಾಜ್ಯ ಯುವಜನ ಒಕ್ಕೂಟ, ಪುತ್ತೂರು ತಾಲೂಕು ಯುವಜನ ಒಕ್ಕೂಟ ಪುತ್ತೂರು ಮತ್ತು ನೆಹರೂನಗರ ಸುದಾನ ವಸತಿಯುತ ಶಾಲೆ ಇವಿಗಳ ಸಂಯುಕ್ತ ಆಶ್ರಯದಲ್ಲಿ ಸುದಾನ ಶಾಲೆ ವಠಾರದಲ್ಲಿ ನಾಲ್ಕು ದಿನ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳದ 2ನೇ ದಿನವಾದ ಶುಕ್ರವಾರ 3 ವೇದಿಕೆಗಳಲ್ಲಿ ಒಟ್ಟು 11 ವಿವಿಧ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮದ ಪ್ರಧಾನ ವೇದಿಕೆಯಾದ ವಿವೇಕ ವೇದಿಕೆಯಲ್ಲಿ ವೇದಿಕೆಯಲ್ಲಿ ಯುವತಿಯರ ಜಾನಪದ ನೃತ್ಯ ಹಾಗೂ ಕೋಲಾಟ ಯುವಕರ ಡೊಳ್ಳು ಕುಣಿತ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಯಲ್ಲಿ ತಲಾ 15 ತಂಡಗಳು ಭಾಗವಹಿಸಿದ್ದವು.

ಲಿಟ್ಲ್ ಪ್ಲವರ್ ಹಿ.ಪ್ರಾ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪರ್ದಾಳ್, ಸುದಾನ ಶಾಲಾ ಶಿಕ್ಷಕಿ ಕವಿತಾ ಅಡೂರು ಹಾಗೂ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಣೆಗೈದರು.

2ನೇ ವೇದಿಕೆಯಾದ ಡಾ. ಶಿವರಾಮ ಕಾರಂತ ವೇದಿಕೆಯಲ್ಲಿ ಯುವಕರ ಭಾವಗೀತೆ, ಯುವತಿಯರ ರಂಗಗೀತೆ ಹಾಗೂ ಯುವಕರ ಗೀಗಿ ಪದ ನಡೆಯಿತು. ಭಾವಗೀತೆಯಲ್ಲಿ 44 ಹಾಗೂ ರಂಗಗೀತೆಯಲ್ಲಿ 30 ಮಂದಿ ಸ್ಪರ್ಧಾಳುಗಳು ಭಾಗವಸಿದ್ದರು. ಯುವಕರ ಗೀಗಿ ಪದದಲ್ಲಿ 20 ತಂಡಗಳು ಭಾಗವಹಿಸಿದ್ದವು.

ಸುದಾನ ಶಾಲಾ ಶಿಕ್ಷಕರಾದ ನಿಕೇತ್ ಮೋಹನ್ ಶೆಟ್ಟಿ, ಜೀವಿತಾ ರೈ ಹಾಗೂ ಗಾಯತ್ರಿ ಮನೋಹರ್ ಕಾರ್ಯಕ್ರಮ ನಿರೂಪಣೆಗೈದರು. 3ನೇ ವೇದಿಕೆಯಾದ ಬಿಇಎಂ ಹಿ.ಪ್ರಾ ಶಾಲೆಯಲ್ಲಿರುವ ಕೋಟಿ-ಚೆನ್ನಯ ವೇದಿಕೆಯಲ್ಲಿ ಯುವಕರ ರಂಗಗೀತೆ, ಯುವತಿಯರ ಭಾವಗೀತೆ, ಗೀಗಿ ಪದ ಹಾಗೂ ರಾಗಿ ಬೀಸುವ ಪದ ನಡೆಯಿತು. ಯುವತಿಯ ಭಾವಗೀತೆಯಲ್ಲಿ 38, ಯುವಕರ ರಂಗಗೀತೆಯಲ್ಲಿ 44 ಮಂದಿ ಮತ್ತು ಯುವತಿಯರ ಗೀಗಿ ಪದ 18 ಹಾಗೂ ರಾಗಿ ಬೀಸುವ ಪದದಲ್ಲಿ 27 ತಂಡಗಳು ಭಾಗವಹಿಸಿದ್ದವು. ಶಿಕ್ಷಕರಾದ ತಾರಾನಾಥ ಸವಣೂರು, ತಿರುಮಲೇಶ್ವರ, ರಾಜೇಂದ್ರ ಹಾಗೂ ವಿನಯ ನಿರೂಪಣೆಗೈದರು.

ಯುವತಿಯರ ಡೊಳ್ಳು ಕುಣಿತ ಪ್ರದರ್ಶನಕ್ಕೆ ಅವಕಾಶ

ಮೇಳದಲ್ಲಿ ಡೊಳ್ಳು ಕುಣಿತ ಸ್ಫರ್ಧೆಯು ಯುವಕರಿಗೆ ಮಾತ್ರವೇ ಮೀಸಲಾಗಿದೆ. ಆದರೆ ಹಾವೇರಿ ಜಿಲ್ಲೆಯಿಂದ ಆಗಮಿಸಿದ್ದ ಮಹಿಳಾ ಡೊಳ್ಳು ಕುಣಿತ ತಂಡವು ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿವೇಕ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. ಮಹಿಳಾ ತಂಡವು ಅದ್ದೂರಿ ಪ್ರದರ್ಶನ ನೀಡಿತ್ತು. ತಂಡಕ್ಕೆ ನಿವೃತ್ತ ಪ್ರಾಂಶುಪಾಲ ಅಬ್ರಹಾಂ ವರ್ಗೀಸ್ 2000 ರೂ. ನಗದು ಬಹುಮಾನ ನೀಡಿ ಗೌರವಿಸಿದರು. ತಂಡವನ್ನು ಶಾಸಕಿ ಶಕುಂತಳಾ ಶೆಟ್ಟಿ, ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಸ್ಮರಣಿಕೆ ನೀಡಿ ಗೌರವಿಸಿರುವುದು ವಿಶೇಷವಾಗಿತ್ತು.

4202 ಸ್ಪರ್ಧಿಗಳು:

ಈ ಹಿಂದೆ ತಾಲ್ಲೂಕು, ಜಿಲ್ಲೆ ಹಾಗೂ ವಿಭಾಗಮಟ್ಟದಲ್ಲಿ ನಡೆದು ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದ ಯುವಜನಮೇಳವನ್ನು ಪ್ರಥಮ ಬಾರಿಗೆ ಬದಲಾವಣೆ ಮಾಡ ಲಾಗಿದ್ದು, ಈ ಬಾರಿ ಜಿಲ್ಲಾ ಮಟ್ಟದಿಂದ ನೇರವಾಗಿ ರಾಜ್ಯಮಟ್ಟದಲ್ಲಿ ಭಾಗವಹಿಸುವುದರಿಂದ ಪ್ರತೀ ಜಿಲ್ಲೆಯ 192 ಸ್ಪರ್ಧಾಳುಗಳಂತೆ 30 ಜಿಲ್ಲೆಗಳಿಂದ 5760 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ ವಿವಿಧ ಜಿಲ್ಲೆಗಳ 2522 ಯುವಕರು ಹಾಗೂ 1680 ಯುವತಿಯರು ಸೇರಿದಂತೆ ಒಟ್ಟು 4202 ಸ್ಪರ್ಧಾಳುಗಳು ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News