×
Ad

ಉ.ಪ್ರ:48 ಗಂಟೆಗಳಲ್ಲಿ 18 ಎನ್‌ಕೌಂಟರ್‌ಗಳು!

Update: 2018-02-03 19:07 IST

ಲಕ್ನೋ,ಫೆ.3: ಕಳೆದ 48 ಗಂಟೆಗಳಲ್ಲಿ ಕನಿಷ್ಠ 18 ಎನ್‌ಕೌಂಟರ್‌ಗಳನ್ನು ನಡೆಸಿರುವ ಉತ್ತರ ಪ್ರದೇಶ ಪೊಲೀಸರು ತಮ್ಮ ‘ವಾಂಟೆಡ್’ ಪಟ್ಟಿಯಲ್ಲಿದ್ದ 25 ಜನರನ್ನು ಬಂಧಿಸಿದ್ದಾರೆ. ತನ್ನ ತಲೆಯ ಮೇಲೆ 25,000 ರೂ.ಗಳ ಬಹುಮಾನವನ್ನು ಹೊತ್ತಿದ್ದ ಕ್ರಿಮಿನಲ್ ಇಂದ್ರಪಾಲ್ ಎಂಬಾತ ಮುಝಫ್ಫರ್ ನಗರದಲ್ಲಿ ಪೋಲಿಸರ ಗುಂಡಿಗೆ ಬಲಿಯಾಗಿದ್ದಾನೆ.

ಗಾಝಿಯಾಬಾದ್ ನಿವಾಸಿ ಇಂದ್ರಪಾಲ್ ವಿರುದ್ಧ 33 ಕ್ರಿಮಿನಲ್ ಪ್ರಕರಣಗಳು ಬಾಕಿಯಿದ್ದವು. 2013ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದ್ದ ಶೂಟೌಟ್‌ನಲ್ಲಿ ಈತ ಭಾಗಿಯಾಗಿದ್ದು, ಈ ಘಟನೆಯಲ್ಲಿ ಓರ್ವ ಪೊಲೀಸ್ ಕೊಲ್ಲಲ್ಪಟ್ಟಿದ್ದರು ಎಂದು ಪೊಲೀಸರು ತಿಳಿಸಿದರು. ಇಂದ್ರಪಾಲ್ ವಿಶೇಷ ಕಾರ್ಯಪಡೆಯ ಮೇಲೆ ಗುಂಡು ಹಾರಿಸಿದ್ದರಿಂದ ಓರ್ವ ಎಸ್‌ಐ ಗಾಯಗೊಂಡಿದ್ದಾರೆ.

ಗುಂಡಿನ ಕಾಳಗ ಶನಿವಾರ ನಸುಕಿನ ಎರಡು ಗಂಟೆಯ ಸುಮಾರಿಗೆ ಕನೌಜ್ ಜಿಲ್ಲೆಯಲ್ಲಿ ನಡೆದಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಆದರೆ ದುಷ್ಕರ್ಮಿಗಳು ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ.

ಶುಕ್ರವಾರ ಗೋರಖ್ ಪುರದಲ್ಲಿ ನಡೆದ ಇನ್ನೊಂದು ಎನ್‌ಕೌಂಟರ್‌ನಲ್ಲಿ ಇಬ್ಬರು ಕ್ರಿಮಿನಲ್ ಗಳನ್ನು ಬಂಧಿಸಲಾಗಿದೆ. ಕಳೆದ ರವಿವಾರ ನಡೆದಿದ್ದ ಉದ್ಯಮಿ ದಿನೇಶ ಗುಪ್ತಾ ಹತ್ಯೆಯಲ್ಲಿ ತಮ್ಮ ಪಾತ್ರವನ್ನು ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮೇಲಿಂದ ಮೇಲೆ ಎನ್‌ಕೌಂಟರ್‌ಗಳು ನಡೆಯುತ್ತಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ನಾವು ಅಪರಾಧಿಗಳನ್ನು ಹಿಡಿಯಬೇಕಿರುವುದರಿಂದ ಎನ್‌ಕೌಂಟರ್‌ಗಳು ನಡೆಯು ತ್ತಲೇ ಇರುತ್ತವೆ. ನಾವು ಆತ್ಮರಕ್ಷಣೆಗಾಗಿ ಮಾತ್ರ ಗುಂಡು ಹಾರಿಸುತ್ತೇವೆ ಎಂದು ರಾಜ್ಯದ ನೂತನ ಡಿಜಿಪಿ ಒ.ಪಿ.ಸಿಂಗ್ ಅವರು ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಸುಮಾರು 950 ಎನ್‌ಕೌಂಟರ್‌ಗಳು ನಡೆದಿವೆ. 30ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದು, 200ಕ್ಕೂ ಹೆಚ್ಚಿನ ಜನರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರ ಈ ಎನ್‌ಕೌಂಟರ್ ನೀತಿಯು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗಮನವನ್ನೂ ಸೆಳೆದಿದ್ದು, ಅದು ಎನ್‌ಕೌಂಟರ್‌ಗಳಲ್ಲಿಯ ಹತ್ಯೆಗಳ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಕಳೆದ ವರ್ಷದ ನವೆಂಬರ್‌ನಲ್ಲಿ ನೋಟಿಸ್‌ನ್ನು ಜಾರಿಗೊಳಿಸಿತ್ತು.

ಆದರೆ ಪ್ರತಿಯೊಂದೂ ಎನಕೌಂಟರ್‌ನ ಬಳಿಕ ಸೂಕ್ತ ಮ್ಯಾಜಿಸ್ಟೀರಿಯಲ್ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ರಾಜ್ಯ ಸರಕಾರವು ಹೇಳಿದೆ.

ಈ ವರ್ಷದ ಜನವರಿಯಲ್ಲಿ ಮಥುರಾದಲ್ಲಿ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವಿನ ಗುಂಡಿನ ಕಾಳಗದಲ್ಲಿ ಗುಂಡೇಟಿನಿಂದ ಎಂಟರ ಹರೆಯದ ಅಮಾಯಕ ಬಾಲಕನೋರ್ವ ಮೃತಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News