ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷನಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ

Update: 2018-02-03 14:15 GMT

ಮುಂಬೈ,ಫೆ.3: ಜ.1ರಂದು ಪುಣೆ ಸಮೀಪದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಿಂದೂ ಜನಜಾಗೃತಿ ಸಮಿತಿಯ ಅಧ್ಯಕ್ಷ ಮಿಲಿಂದ ಏಕಬೋಟೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಈ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಇತರ ಹಲವಾರು ಜನರು ಗಾಯಗೊಂಡಿದ್ದರು.

ಈ ಜಾತಿ ಹಿಂಸಾಚಾರಕ್ಕೂ ತನಗೂ ಎಳ್ಳಷ್ಟೂ ಸಂಬಂಧವಿಲ್ಲ. ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಏಕಬೋಟೆ ತನ್ನ ಅರ್ಜಿಯಲ್ಲಿ ವಾದಿಸಿದ್ದು, ಇದನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.

ಪ್ರಕರಣದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯನ್ನು ಅನ್ವಯಿಸಿರುವುದನ್ನು ಏಕಬೋಟೆ ಪರ ವಕೀಲ ನಿತಿನ್ ಪ್ರಧಾನ್ ಪ್ರಶ್ನಿಸಿದರಾದರೂ ನ್ಯಾಯಮೂರ್ತಿಗಳಾದ ಎಸ್.ಸಿ.ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ಅವರ ವಿಭಾಗೀಯ ಪೀಠವು ತಳ್ಳಿಹಾಕಿತು. ಪ್ರಕರಣದಲ್ಲಿ ಕಾಯ್ದೆಯ ಅನ್ವಯವು ಸೂಕ್ತವಾಗಿದೆ ಎಂದು ಅದು ಎತ್ತಿ ಹಿಡಿಯಿತು. ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಬೇಕೆಂಬ ಪ್ರಧಾನ್ ಅವರ ಕೋರಿಕೆಯನ್ನೂ ಅದು ತಿರಸ್ಕರಿಸಿತು.

ಜಾತಿ ಹಿಂಸಾಚಾರದ ಬಗ್ಗೆ ತೀವ್ರ ತಳಮಳವನ್ನು ವ್ಯಕ್ತಪಡಿಸಿದ ಪೀಠವು, ಕೆಲವು ವಿಷಯಗಳಲ್ಲಿ ಮಾತ್ರ ಜಾತಿಯ ಪ್ರಶ್ನೆ ಏಕೆ ಬರುತ್ತದೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿತು. ನಮ್ಮ ದೈನಂದಿನ ಜೀವನದಲ್ಲಿ ನಾವು ವ್ಯವಹರಿಸುವ ವ್ಯಕ್ತಿಗಳ ಜಾತಿಗಳನ್ನು ನಾವು ಕೇಳುವುದಿಲ್ಲ ಎಂದು ಹೇಳಿದ ಪೀಠವು, ಬಹುಶಃ ಇಂದಿನ ಸಂವಹನ ವ್ಯವಸ್ಥೆಯು ತಪ್ಪು ಸಂದೇಶಗಳನ್ನು ತ್ವರಿತವಾಗಿ ಹರಡುತ್ತಿದೆ ಎಂದು ಅಭಿಪ್ರಾಯಿಸಿತು.

ಏಕಬೋಟೆ ಕುಟುಂಬ ಸದಸ್ಯರಿಗೆ ಮೂರು ದಿನಗಳಿಂದ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂದು ಪ್ರಧಾನ ದೂರಿಕೊಂಡಾಗ, ಏಕಬೋಟೆ ಶರಣಾಗಿದ್ದರೆ ಈ ಎಲ್ಲ ಕಿರುಕುಳಗಳು ತಪ್ಪುತ್ತಿದ್ದವು ಎಂದು ನ್ಯಾಯಾಲಯವು ಹೇಳಿತು.

 ಏಕಬೋಟೆ ಜೊತೆಗೆ ಶಿವಜಾಗರ ಪ್ರತಿಷ್ಠಾನದ ಅಧ್ಯಕ್ಷ ಸಂಭಾಜಿ ಭಿಡೆ ಕೂಡ ಆರೋಪಿಯೆಂದು ಪ್ರಕರಣದಲ್ಲಿ ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News