6ರಿಂದ 8ನೇ ತರಗತಿವರೆಗೆ ಸಮಾನ ಮೌಲ್ಯಮಾಪನಾ ನೀತಿ ಹಿಂಪಡೆದ ಸಿಬಿಎಸ್‌ಇ
ಹೊಸದಿಲ್ಲಿ, ಫೆ.3: ದೇಶದ ಪ್ರಮುಖ ಮಕ್ಕಳ ಹಕ್ಕುಗಳ ಸಂಸ್ಥೆಯಾದ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ (ಎನ್ ಸಿಪಿಸಿಆರ್) ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 6ರಿಂದ 8ನೇ ತರಗತಿವರೆಗಿನ ಸಮಾನ ಮೌಲ್ಯಮಾಪನಾ ನೀತಿಯನ್ನು ಹಿಂಪಡೆದುಕೊಂಡಿದೆ.
ಈ ರೀತಿಯ ಮೌಲ್ಯಮಾಪನಾ ವ್ಯವಸ್ಥೆಯು ಶಿಕ್ಷಣದ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಎನ್ ಸಿಪಿಸಿಆರ್ ವಾದಿಸಿತ್ತು.
10ನೇ ತರಗತಿಯ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಸಿದ್ಧತೆ ನಡೆಸಲು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ 6ನೇ ತರಗತಿಯಿದಲೇ ಪರೀಕ್ಷಾ ವಿಧಾನ, ಮೌಲ್ಯಮಾಪನಾ ಮತ್ತು ಅಂಕಪಟ್ಟಿ ನೀಡುವಿಕೆಯಲ್ಲಿ ಸಮಾನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಿಬಿಎಸ್‌ಇ ನಿರ್ಧರಿಸಿದೆ ಎಂದು ಈ ಹಿಂದಿನ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಆದರೆ ಸದ್ಯ ಈ ನಿರ್ಧಾರವನ್ನು ಹಿಂಪಡೆಯಲಾಗಿದ್ದು ಈ ಬಗ್ಗೆ ಮಂಡಳಿಯು ಹೊಸ ಅಧಿಸೂಚನೆಯನ್ನು ಹೊರಡಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹತ್ತನೇ ತರಗತಿಗೆ ಮಂಡಳಿ ಪರೀಕ್ಷಾ ವಿಧಾನವನ್ನು ಪುನರ್‌ಪರಿಚಯಿಸಲು ಕೇಂದ್ರ ಸರಕಾರವು ನಿರ್ಧರಿಸಿರುವುದರಿಂದ ಹತ್ತನೇ ತರಗತಿಗೆ ನಡೆಸಲಾಗುತ್ತಿದ್ದ ನಿರಂತರ ಮತ್ತು ಸಮಗ್ರ ಮೌಲ್ಯಮಾಪನಾ ವ್ಯವಸ್ಥೆಯನ್ನು ಈಗಾಗಲೇ ಕೈಬಿಡಲಾಗಿದೆ.