ಆಫ್ರಿಕದಲ್ಲಿ ಅಪಹರಣಕ್ಕೀಡಾದ ಹಡಗಿನಲ್ಲಿ ಕಾಸರಗೋಡಿನ ಯುವಕ
ಕಾಸರಗೋಡು, ಫೆ.3: ಆಫ್ರಿಕಾ ಕರಾವಳಿಯಲ್ಲಿ ಕಡಲ್ಗಳ್ಳರು ತೈಲ ಸಾಗಾಟದ ಹಡಗೊಂದನ್ನು ಅಪಹರಿಸಿದ್ದು, ಅದರಲ್ಲಿ ಕಾಸರಗೋಡು ನಿವಾಸಿ ಯೋರ್ವರು ಇದ್ದಾರೆಂಬ ಮಾಹಿತಿ ಲಭಿಸಿದೆ.
ಉದುಮ ಪೇರಳೆ ಹಿತ್ತಿಲಿನ ಶ್ರೀಉಣ್ಣಿ (25) ಈ ಹಡಗಿನಲ್ಲಿದ್ದು, ಹಡಗು ಅಪಹರಣದ ಕುರಿತು ಮನೆಯವರಿಗೆ ಮಾಹಿತಿ ಲಭಿಸಿದೆ. ಮುಂಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಪನಾಮಾ ನೋಂದಣಿಯ ಮರೈನ್ ಎಕ್ಸ್‌ಪ್ರೆಸ್ ಎಂಬ ಹಡಗನ್ನು ಜ.31ರಂದು ಕಡಲ್ಗಳ್ಳರು ಅಪಹರಿಸಿದ್ದಾರೆ. ಈ ಹಡಗಿನಲ್ಲಿ ಶ್ರೀಉಣ್ಣಿ ಸೇರಿದಂತೆ 20 ಮಂದಿಯಿದ್ದರು ಎಂದು ತಿಳಿದುಬಂದಿದೆ. ಹಡಗಿನೊಂದಿಗಿನ ಸಂಪರ್ಕ ಕಡಿತಗೊಂಡಿರುವುದಾಗಿ ಕಂಪೆನಿ ಅಧಿಕಾರಿಗಳು ಮನೆ ಯವರಿಗೆ ತಿಳಿಸಿದ್ದಾರೆ.
ಶ್ರೀಉಣ್ಣಿ (25) ನಾಲ್ಕು ವರ್ಷಗಳಿಂದ ಈ ಹಡಗಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಜೆಯಲ್ಲಿ ಊರಿಗೆ ಬಂದಿದ್ದ ಅವರು ಒಂದು ತಿಂಗಳ ಹಿಂದೆಯಷ್ಟೇ ಮತ್ತೆ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಜ.31ರಂದು ಅಪರಾಹ್ನ 3 ಗಂಟೆಗೆ ಅವರು ಮನೆಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಅದೇ ದಿನ ರಾತ್ರಿಯಿಂದ ಹಡಗು ಮತ್ತು ಮುಂಬೈಯಲ್ಲಿರುವ ಹಡಗು ಕಂಪೆನಿಯ ಕೇಂದ್ರದ ನಡುವಿನ ಸಂಪರ್ಕ ಕಡಿದಿರುವುದಾಗಿ ಕಂಪೆನಿ ಮೂಲಗಳು ತಿಳಿಸಿವೆ.
ಹಡಗು ಅಪಹರಣ ಸುದ್ದಿ ತಿಳಿದು ಮನೆಯಲ್ಲಿ ಆತಂಕ ಮನೆ ಮಾಡಿದೆ.