ತ್ರಿವಳಿ ತಲಾಕ್ ತಡೆಯಲು ನಿಕಾಹ್‌ನಾಮಾದಲ್ಲಿ ಬದಲಾವಣೆ: ಎಐಎಂಪಿಎಲ್‌ಬಿ
ಲಕ್ನೊ, ಫೆ.3: ತ್ರಿವಳಿ ತಲಾಕ್ ಪದ್ಧತಿಯನ್ನು ತಡೆಯಲು ಮಾದರಿ ನಿಕಾಹ್‌ನಾಮಾದಲ್ಲಿ ಹೊಸ ನಿಬಂಧನೆಯನ್ನು ಸೇರಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಚಿಂತಿಸುತ್ತಿದೆ ಎಂದು ಮಂಡಳಿಯ ವಕ್ತಾರರು ತಿಳಿಸಿದ್ದಾರೆ. ಈ ನಿಬಂಧನೆಯ ಪ್ರಕಾರ ವಿವಾಹವಾಗುವ ವ್ಯಕ್ತಿಯು ತಾನು ತ್ರಿವಳಿ ತಲಾಕ್ ನೀಡುವುದಿಲ್ಲ ಎಂದು ಭರವಸೆಯನ್ನು ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ತ್ರಿವಳಿ ತಲಾಕ್ ಪದ್ಧತಿಯನ್ನು ಅಪರಾಧೀಕರಣಗೊಳಿಸುವ ಕಾಯ್ದೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರವು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಡಳಿಯ ಈ ನಿರ್ಧಾರವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ತ್ರಿವಳಿ ತಲಾಕ್ ಪದ್ಧತಿಗೆ ವಿರೋಧ ವ್ಯಕ್ತಪಡಿಸಿರುವ ಮಂಡಳಿಯು ಈ ಬಗ್ಗೆ ಕಾನೂನು ತರುವ ಪ್ರಸ್ತಾವನೆಯನ್ನು ಮಾತ್ರ ವಿರೋಧಿಸಿದೆ. ಈ ರೀತಿಯ ಕಾನೂನು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಮೂಗುತೂರಿಸಿದಂತಾಗುತ್ತದೆ ಎಂದು ಮಂಡಳಿ ತಿಳಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಯಾವುದೇ ಸುಧಾರಣೆಗಳನ್ನು ಮಾಡದೆ ಇರುವ ಕಾರಣಕ್ಕಾಗಿ ಮಂಡಳಿ ತೀವ್ರ ಟೀಕೆಗೂ ಒಳಗಾಗಿದೆ.
ಇನ್ನು ಮುಂದೆ ನಿಕಾಹ್‌ನಾಮಾದಲ್ಲಿ “ನಾನು ತ್ರಿವಳಿ ತಲಾಕ್ ನೀಡುವುದಿಲ್ಲ” ಎಂಬ ಸೂಚನೆಯೊಂದಿರುತ್ತದೆ. ವಿವಾಹವಾಗುವ ವ್ಯಕ್ತಿಯು ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ತ್ರಿವಳಿ ತಲಾಕ್ ನೀಡಲು ಸಾಧ್ಯವಿಲ್ಲ ಎಂದು ಎಐಎಂಪಿಎಲ್‌ಬಿ ವಕ್ತಾರ ಮೌಲಾನಾ ಖಲೀಲ್ ಉಲ್ ರೆಹ್ಮಾನ್ ಸಜ್ಜಾದ್ ನೊಮಾನಿ ತಿಳಿಸಿದ್ದಾರೆ.
ಈ ಬಗ್ಗೆ ವಿವರವಾದ ಸಭೆಯು ಫೆಬ್ರವರಿ 9ರಂದು ಹೈದರಾಬಾದ್‌ನಲ್ಲಿ ನಡೆಯಲಿರುವುದಾಗಿ ಅವರು ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ತ್ರಿವಳಿ ತಲಾಕ್ ಪದ್ಧತಿಯನ್ನು ನಿಷೇಧಿಸಿ ಆದೇಶ ನೀಡಿತ್ತು.