ಸಾರ್ವಜನಿಕರು ಧನಾತ್ಮಕ ವಿಚಾರಕ್ಕೆ ಸದುಪಯೋಗಪಡಿಸಿಕೊಳ್ಳಿ: ಶಾಸಕಿ ಶಕುಂತಳಾ ಶೆಟ್ಟಿ
ಪುತ್ತೂರು, ಫೆ. 3: ಇಂದಿನ ಇಂಟರ್‌ನೆಟ್ ಯುಗದಲ್ಲಿ ಪ್ರತಿಯೊಂದು ವಿಚಾರಕ್ಕೂ ತಂತ್ರಜ್ಞಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯ 7 ಭಾಗಗಳಲ್ಲಿ ಉಚಿತ ವೈಫೈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಧನಾತ್ಮಕ ವಿಚಾರಗಳಿಗೆ ಇದನ್ನು ಸದುಪಯೋಗ ಪಡಿಸಿಕೊಳ್ಳ ಬೇಕು. ಯಾವುದೇ ಕೆಟ್ಟ ವಿಚಾರಗಳಿಗೆ ಇದನ್ನು ಬಳಸಬೇಡಿ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ತಿಳಿಸಿದರು.
ಅವರು ಶನಿವಾರ ಪುತ್ತೂರು ಕ್ಯಾಂಪ್ಕೋ ರೋಟರಿ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕ್ವಾಡ್‌ಜೆನ್ ಮತ್ತು ಬಿಎಸ್‌ಎನ್‌ಎಲ್ ಸಂಸ್ಥೆಯ ಸಹಕಾರದಲ್ಲಿ ಉಚಿತ ವೈಫೈ ಸೇವೆ ಉದ್ಘಾಟಿಸಿ ಮಾತನಾಡಿದರು.
ತನ್ನ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 7.50 ಲಕ್ಷ ರೂ. ವೆಚ್ಚದಲ್ಲಿ 1 ವರ್ಷದ ಅವಧಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಬೊಳುವಾರಿನಿಂದ ದರ್ಬೆ ಲ್ಯಾಂಪ್ಸ್ ಸೊಸೈಟಿಯವರೆಗೆ ಇದರ ಪ್ರಯೋಜನ ಸಿಗಲಿದೆ. ದಿನದಲ್ಲಿ ಒಂದು ಸಿಮ್‌ಗೆ ಅರ್ಧ ತಾಸು ವೈಫೈ ಬಳಕೆ ಮಾಡಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಪುತ್ತೂರು ಬಿಎಸ್‌ಎನ್‌ಎಲ್ ಸಂಸ್ಥೆಯ ಉಪ ಮಹಾಪ್ರಬಂಧಕ ಪ್ರಕಾಶ್ ಮಾತನಾಡಿ, ಇಂತಹ ಯೋಜನೆಯನ್ನು ದೊಡ್ಡ ನಗರಗಳಲ್ಲಿಯೂ ಜಾರಿಗೆ ತಂದಿಲ್ಲ. ಆದರೆ ಶಾಸಕಿ ಶಕುಂತಳಾ ಶೆಟ್ಟಿ ಬಹಳ ಕಾಳಜಿಯಿಂದ ಶಾಸಕರ ನಿಧಿಯ ಮೂಲಕ ಪುತ್ತೂರಿನಂತಹ ನಗರದಲ್ಲೂ ಉಚಿತ ವೈಫೈ ಸೌಲಭ್ಯ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದು ಅವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜಗಜೀವನ್‌ದಾಸ್ ರೈ ಮಾತನಾಡಿ, ಇಂಟರ್‌ನೆಟ್ ಯುಗದಲ್ಲಿ ವೈಫೈ ಸೇವೆ ನಿಜಕ್ಕೂ ಅತ್ಯಂತ ಅವಶ್ಯಕ. ಅದರಲ್ಲೂ ಶಾಸಕಿ ಉಚಿತ ಸೇವೆ ನೀಡುವ ಮೂಲಕ ಶ್ರೇಷ್ಠ ಕೆಲಸ ಮಾಡಿದ್ದಾರೆ. ಇವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯ ಸಹಾಯಕ ಪ್ರಬಂಧಕ ಆನಂದ್, ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ನಾಮನಿರ್ದೇಶಿತ ಸದಸ್ಯ ಮೊಯ್ದಿನ್ ಹರ್ಷದ್ ದರ್ಬೆ ಉಪಸ್ಥಿತರಿದ್ದರು.
ಪೂರ್ಣೇಶ್ ಸ್ವಾಗತಿಸಿದರು. ಕ್ವಾಡ್‌ಜೆನ್ ಸಂಸ್ಥೆಯ ಸಿಬ್ಬಂದಿ ತೇಜಸ್ ಪ್ರಸ್ತಾವನೆಗೈದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.