ಕೇವಲ 1 ರೂಪಾಯಿಗಾಗಿ 54ರ ಹರೆಯದ ವ್ಯಕ್ತಿಯ ಹತ್ಯೆ!
Update: 2018-02-03 20:09 IST
ಥಾಣೆ(ಮಹಾರಾಷ್ಟ್ರ),ಫೆ.3: ಜಿಲ್ಲೆಯ ಕಲ್ಯಾಣ್‌ನಲ್ಲಿ ಕೇವಲ ಒಂದು ರೂಪಾಯಿಗಾಗಿ ನಡೆದ ಜಗಳದಲ್ಲಿ 54ರ ಹರೆಯದ ವ್ಯಕ್ತಿಯೋರ್ವ ಪ್ರಾಣ ಕಳೆದುಕೊಂಡಿದ್ದಾರೆ.
ಮನೋಹರ ಗಾಮ್ನೆ ಶುಕ್ರವಾರ ತಡರಾತ್ರಿ ಮನೆ ಸಮೀಪದ ರಾಮಬಾಗ್‌ನಲ್ಲಿರುವ ಅಂಗಡಿಗೆ ತೆರಳಿ ಮೊಟ್ಟೆಗಳನ್ನು ಖರೀದಿಸಿದ್ದ. ಈ ವೇಳೆ ಗಾಮ್ನೆ ಒಂದು ರೂ.ಕಡಿಮೆ ನೀಡಿದ್ದಾನೆಂದು ಅಂಗಡಿ ಮಾಲಕ ಸುಧಾಕರ ಪ್ರಭು ಆರೋಪಿಸಿದ್ದು, ಇದು ಜಗಳಕ್ಕೆ ಕಾರಣವಾಗಿತ್ತು. ಪ್ರಭು ಗಾಮ್ನೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.
ಮನೆಗೆ ವಾಪಸಾದ ಗಾಮ್ನೆ ಮಗನೊಡನೆ ಮತ್ತೆ ಅಂಗಡಿಗೆ ತೆರಳಿ ತನ್ನನ್ನು ಬೈದಿದ್ದೇಕೆ ಎಂದು ಪ್ರಶ್ನಿಸಿದ್ದ. ಇದು ಇನ್ನೊಂದು ಸುತ್ತಿನ ಜಗಳಕ್ಕೆ ಕಾರಣವಾಗಿತ್ತು. ಈ ವೇಳೆ ಮಾಲಕನ ಮಗ ಗಾಮ್ನೆಯನ್ನು ಕಾಲುಗಳಿಂದ ಒದ್ದು, ಮುಷ್ಟಿಯಿಂದ ಹೊಟ್ಟೆಗೆ ಗುದ್ದಿದ್ದ. ಏಟನ್ನು ತಡೆಯಲಾಗದೆ ಗಾಮ್ನೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.