×
Ad

ಉಡುಪಿ: ರೈತರ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ತರಾಟೆ

Update: 2018-02-03 21:24 IST

ಉಡುಪಿ, ಫೆ.3: ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ರೈತರ ಜನ ಸಂಪರ್ಕ ಸಭೆಯಲ್ಲಿ ಜಿಲ್ಲೆಯ ರೈತರಿಂದ ಸಮಸ್ಯೆಗಳ ಮಹಾಪೂರವೇ ಕೇಳಿಬಂತು. ಸಮಸ್ಯೆಗಳ ಬಗ್ಗೆ ಸಮರ್ಪಕ ಉತ್ತರ ನೀಡದ ಅಧಿಕಾರಿಗಳನ್ನು ರೈತರು ತೀವ್ರ ವಾಗಿ ತರಾಟೆಗೆ ತೆಗೆದುಕೊಂಡರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಡುಪ್ರಾಣಿಗಳ ಹಾವಳಿಯನ್ನು ತಡೆಯಲು ಕೃಷಿಭೂಮಿಗಳಿಗೆ ಕಾವಲುಗಾರರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕೆಂಬ ರೈತರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಯೋಜನೆಯ ನಿಯಮಾವಳಿಗಳನ್ನು ಕೇಂದ್ರ ಸರಕಾರ ಮಾಡುವುದರಿಂದ ರಾಜ್ಯ ಸರಕಾರದ ಮೂಲಕ ಆ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.

ಜಿಲ್ಲಾ ರೈತ ಸಂಘದ ಸತೀಶ್ ಹಿರಿಯಡಕ ಮಾತನಾಡಿ, ಕಾಡುಪ್ರಾಣಿಗಳಿಂದ ಹಾನಿಯಾಗುವ ಬೆಳೆಗಳ ರಕ್ಷಣೆಯನ್ನು ರೈತರಿಂದ ಮಾಡಲು ಆಗುತ್ತಿಲ್ಲ. ಇದಕ್ಕೆ ಕೋವಿ ಪರವಾನಿಗೆ ಕೂಡ ಇಲಾಖೆ ನೀಡುತ್ತಿಲ್ಲ. ಇದರಿಂದ ಬೆಳೆಗಳ ರಕ್ಷಣೆಗೆ ಬೇಕಾದ ಕಾವಲುಗಾರರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಬಂದೂಕು ಪರವಾನಿಗೆ: ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಭಟ್ ಮಾತನಾಡಿ, ಪರವಾನಿಗೆ ಹೊಂದಿರುವ ಬಂದೂಕುದಾರರು ಮಾತ್ರ ಕೃಷಿ ಪ್ರದೇಶಕ್ಕೆ ನುಗ್ಗಿದ ಕಾಡುಹಂದಿಗಳನ್ನು ಕೊಲ್ಲಲು ಅವಕಾಶ ಇರುವುದು. ಉರುಳು ಹಾಕಿ ಸಾಯುವಂತೆ ಮಾಡಿದರೆ ಅದು ಅಪರಾಧ ಆಗುತ್ತದೆ ಎಂದು ತಿಳಿಸಿದರು. ಇದಕ್ಕೆ ರೈತರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾದವು. ಸರಕಾರದ ಆದೇಶದಲ್ಲಿ ಉರುಳು ಹಾಕಿ ಹಂದಿಗಳನ್ನು ತಡೆಯಬಹುದಾಗಿದೆ ಎಂದು ಪ್ರಸನ್ನ ಕುಮಾರ್ ಶೆಟ್ಟಿ ಹೇಳಿದರು. ಹೀಗೆ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಮಧ್ಯೆ ಪ್ರವೇಶಿಸಿದ ಸಚಿವರು, ಅಧಿವೇಶನದ ಸಮಯದಲ್ಲಿ ರೈತರ ನಿಯೋಗ ವನ್ನು ಬೆಂಗಳೂರಿಗೆ ಕರೆಸಿ ಅರಣ್ಯ ಸಚಿವ ರಮಾನಾಥ ರೈ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕೋವಿ ಲೈನನ್ಸ್ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ವನ್ಯಜೀವಿ ಕಾನೂನು ಕೇಂದ್ರ ಸರಕಾರಕ್ಕೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ಯಾವುದೇ ಮಾರ್ಪಡುಗಳಿದ್ದರೂ ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಕೆಲಸ ಮಾಡಲಾಗುವುದು ಎಂದರು.

ರಸ್ತೆ ನಿರ್ಮಾಣಕ್ಕೆ ಅನುಮತಿ: ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡದ ಅಧಿಕಾರಿಗಳ ವಿರುದ್ಧ ರೈತರು ಸಭೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು. ಅರಣ್ಯ ಪ್ರದೇಶದಲ್ಲಿರುವ ಈಗಿರುವ ರಸ್ತೆಯನ್ನು ಅಗಲೀಕರಣ ಮಾಡದೆ ಡಾಮರೀಕರಣ ಮಾಡಲು ಅನುಮತಿ ನೀಡಲಾಗುತ್ತಿದೆ. ಆದರೆ ಮಣ್ಣಿನ ರಸ್ತೆಗೆ ಹೊಸದಾಗಿ ಡಾಮರು ಅಥವಾ ಕಾಂಕ್ರೀಟ್ ಮಾಡಲು ಅನುಮತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಗಣೇಶ್ ಭಟ್ ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಣ್ಣ ರೈತರಂತೆ ದೊಡ್ಡ ರೈತರಿಗೂ ಪ್ರಯೋಜನಗಳು ಸಿಗಬೇಕೆಂಬ ಆಗ್ರಹ ಸಭೆಯಲ್ಲಿ ಕೇಳಿಬಂತು. ಜಿಪಂ ಸಿಇಓ ಮೂಲಕ ಜಿಲ್ಲೆಯ ಎಲ್ಲ ಪಿಡಿಓಗಳಿಗೆ ಸುತ್ತೋಲೆ ಹೊರಡಿಸಿ ದೊಡ್ಡ ರೈತರಿಗೆ ಅವಕಾಶ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

ಡೀಮ್ಡ್ ಫಾರೆಸ್ಟ್ ಭೂಮಿಯನ್ನು ಕಂದಾಯ ಇಲಾಖೆಗೆ ಪಡೆದುಕೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇದು ಬಗೆಹರಿದರೆ 94ಸಿ, 94ಸಿಸಿ ಹಾಗೂ ಇತರ ಕಾಯಿದೆಯಡಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯ ವಾಗುತ್ತದೆ ಎಂದು ಸಚಿವರು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ 68794.76 ಎಕರೆ ಡೀಮ್ಡ್ ಫಾರೆಸ್ಟ್ ಇದ್ದು, ಅದರಲ್ಲಿ 34918.29 ಎಕರೆ ಜಾಗವನ್ನು ಕಂದಾಯ ಇಲಾಖೆಗೆ ನೀಡಿ, 33877 ಎಕರೆ ಜಾಗವನ್ನು ಅರಣ್ಯ ಇಲಾಖೆಯಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿ ತಿಳಿಸಿದರು.

ವಾರಾಹಿ ವಿರುದ್ಧ ಆಕ್ರೋಶ: ನಿಧಾನಗತಿಯಲ್ಲಿ ಸಾಗುತ್ತಿರುವ ವಾರಾಹಿ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ರೈತರು ವಾರಾಹಿ ಯೋಜನೆಯ ಸುಪರಿಡೆಂಟ್ ಇಂಜಿನಿಯರ್ ಪದ್ಮನಾಭ್ ಅವರನ್ನು ತೀವ್ರ ತರಾಟೆಗೆ ತೆಗೆದು ಕೊಂಡರು.

ಮುಖ್ಯಮಂತ್ರಿ ಉದ್ಘಾಟನೆ ಮಾಡಿದ ಬಳಿಕ ಮೂರು ವರ್ಷಗಳಿಂದ ಈವರೆಗೆ ಕೇವಲ 10 ಕಿ.ಮೀ.ವರೆಗೆ ಮಾತ್ರ ಕೆಲಸ ಆಗಿದೆ ಎಂದು ಹರಿ ಪ್ರಸಾದ್ ಶೆಟ್ಟಿ ಆರೋಪಿಸಿದರು. ‘ವಾರಾಹಿಯಿಂದ ಉಡುಪಿಗೆ ನೀರು ತರು ವುದಕ್ಕೆ ನಮ್ಮ ವಿರೋಧ ಇಲ್ಲ. ಅಲ್ಲಿಂದ ಪೈಪ್‌ಲೈನ್ ಹಾದುಬರುವಾಗ ಸಿಗುವ 12 ಗ್ರಾಮಗಳಿಗೆ ನೀರು ನೀಡುವ ಕೆಲಸವನ್ನು ಕೂಡ ಮಾಡಬೇಕು.’ ಎಂದು ದೀಪಕ್ ಕುಮಾರ್ ಶೆಟ್ಟಿ ಆಗ್ರಹಿಸಿದರು. ಈ ಕುರಿತ ಯಾವುದೇ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆಯಲು ನಾವು ಸಿದ್ಧ ಎಂದು ಸಚಿವರು ತಿಳಿಸಿದರು.

ಹೀಗೆ ಪಡಿತರ ಚೀಟಿ ಸಮಸ್ಯೆ, 94ಸಿ ಮತ್ತು ನಮೂನೆ -50, 53ರ ಅರ್ಜಿ ಮಂಜೂರಾತಿಯಲ್ಲಿ ಅರಣ್ಯದ ಸಮಸ್ಯೆ, ರೈತರ ಹೊಲಗಳಿಗೆ ಸಂರ್ಪಕ ರಸ್ತೆ ಕೊರತೆ, ಸಿಆರ್‌ಝೆಡ್ ಸಮಸ್ಯೆ, ಆರ್‌ಟಿಸಿ ವಿತರಣೆ ಹಾಗೂ ಮರಳುಗಾರಿಕೆ ನಿಷೇಧ, ಅಸಮರ್ಪಕ ಕಿಂಡಿ ಅಣೆಕಟ್ಟು ನಿರ್ವಹಣೆ, ಕೃಷಿ ಉಪಕರಣಗಳು ಸಕಾಲಕ್ಕೆ ದೊರೆಯದೆ ಇರುವುದು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳ ಪ್ರಚಾರದ ಕೊರತೆ ಕುರಿತು ದೂರುಗಳು ಸಭೆಯಲ್ಲಿ ರೈತ ರಿಂದ ಕೇಳಿ ಬಂದವು.

ಸಭೆಯಲ್ಲಿ ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯರಾದ ಶಿಲ್ಪಾ ಸುವರ್ಣ, ಸುಧಾಕರ ಶೆಟ್ಟಿ ಮೈರ್ಮಾಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಅಧಿಕಾರಿ ಅಂತೋನಿ ಸುವಾರಿಸ್ ಸ್ವಾಗತಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿ ತೆಂಗಿನಕಾಯಿಗೂ ಪರಿಹಾರ

ಬೆಳೆ ಪರಿಹಾರದ ಕುರಿತು ಸಭೆಯಲ್ಲಿ ವ್ಯಾಪಕ ಚರ್ಚೆಗಳು ನಡೆದವು. ಈ ಬಗ್ಗೆ ಉತ್ತರಿಸಿದ ಡಿಎಫ್‌ಓ ಗಣೇಶ್ ಭಟ್, ಕಾರ್ಕಳ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಬಂದ ಅರ್ಜಿಗಳ ಪೈಕಿ ಒಟ್ಟು 7.5ಲಕ್ಷ ರೂ. ಪರಿಹಾರ ಮೊತ್ತ ದಲ್ಲಿ ಈಗಾಗಲೇ 5ಲಕ್ಷ ರೂ. ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಉಳಿದ ಮೊತ್ತವನ್ನು ಮಾ.31ರೊಳಗೆ ನೀಡಲಾಗುವುದು ಎಂದರು.

ಮಂಗಗಳ ಹಾವಳಿಯಿಂದ ಹಾನಿಗೊಳಾಗುವ ಪ್ರತಿ ತೆಂಗಿನ ಕಾಯಿಗೂ ಆಯಾ ಸಂದರ್ಭದ ಮಾರುಕಟ್ಟೆಯ ಧಾರಣೆಯಂತೆ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ. ಆದರೆ ಈ ಬಗ್ಗೆ ಯಾವುದೇ ಅರ್ಜಿ ಬಂದಿಲ್ಲ. ಅರ್ಜಿಗಳು ಬಂದರೆ ಒಂದು ವಾರದೊಳಗೆ ವಿಲೇವಾರಿ ಮಾಡಿಕೊಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News