ದೇಶದ ಭದ್ರತೆಗೆ ಆಧುನಿಕ ತಂತ್ರಜ್ಞಾನ ಬಳಸುವ ಬದಲು ಯಜ್ಞ ಮಾಡಲು ಹೊರಟ ಕೇಂದ್ರ ಸರಕಾರ

Update: 2018-02-03 16:29 GMT

ಹೊಸದಿಲ್ಲಿ, ಫೆ.3: ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಕೇಂದ್ರ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶನಿವಾರದಂದು ಕಾಂಗ್ರೆಸ್ ಆರೋಪಿಸಿದ್ದು, ಭಾರತದ ಹಿತಾಸಕ್ತಿಯನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲಾಗಿ ಸರಕಾರವು ಕೇವಲ ಮಾತು ಮತ್ತು ಯಜ್ಞಗಳನ್ನೇ ನೆಚ್ಚಿಕೊಂಡಿದೆ ಎಂದು ತಿಳಿಸಿದೆ.

ದೇಶದ ಗಡಿಗಳನ್ನು ರಕ್ಷಿಸುವ ತಮ್ಮ ಜವಾಬ್ದಾರಿಯಿಂದ ಸರಕಾರವು ದೂರಸರಿದಿದೆ ಮತ್ತು ಪ್ರಧಾನಿ ಮೋದಿಯವರು ತಮ್ಮದೇ ತಂತ್ರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ವ್ಯಸ್ತವಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

ಶತ್ರುಪಡೆಗಳು ರೂಪಿಸುವ ಹುನ್ನಾರಗಳನ್ನು ದೂರ ಮಾಡಲು ಯಜ್ಞವನ್ನು ಆಯೋಜಿಸಲಾಗುವುದು ಎಂಬ ಬಿಜೆಪಿ ಸಂಸದ ಮಹೇಶ್ ಗಿರಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ವೇಳೆ ಸುರ್ಜೇವಾಲಾ ಈ ರೀತಿ ಹೇಳಿಕೊಂಡಿದ್ದಾರೆ.

ದೇಶದ ಭದ್ರತೆಗಾಗಿ ಅತ್ಯಾಧುನಿಕ ತಂತ್ರಗಳನ್ನು ಅಳವಡಿಸಿಕೊಳ್ಳುವ ಬದಲಾಗಿ ಕೇಂದ್ರ ಸರಕಾರವು ಕೇವಲ ಮಾತು ಮತ್ತು ಯಜ್ಞವನ್ನು ನೆಚ್ಚಿಕೊಂಡಿದೆ. ಇದು ಸರಕಾರದ, ಕೇವಲ ಬೂಟಾಟಿಕೆ ಶೈಲಿಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶಕ್ಕೆ ಅಪಾಯಕಾರಿಯಾಗಿರುವ ಶತ್ರುಪಡೆಗಳ ಹುನ್ನಾರವನ್ನು ಹೋಗಲಾಡಿಸುವ ಸಲುವಾಗಿ ಮಾರ್ಚ್ 18ರಂದು ಕೆಂಪುಕೋಟೆಯಲ್ಲಿ ಒಂದು ವಾರದ ವೈದಿಕ ಯಜ್ಞವನ್ನು ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿಗಳಾದ ರಾಮ ನಾಥ್ ಕೋವಿಂದ್ ಅವರನ್ನು ಆಹ್ವಾನಿಸಲಾಗುವುದು ಎಂದು ಕಳೆದ ತಿಂಗಳು ಮಹೇಶ್ ಗಿರಿ ತಿಳಿಸಿದ್ದರು.

ಮೋದಿಯವರು ತಮ್ಮದೇ ಸಿದ್ಧಾಂತವನ್ನು ಹೇರುವಲ್ಲಿ ಎಷ್ಟು ವ್ಯಸ್ತವಾಗಿದ್ದಾರೆ ಎಂದರೆ, ದೇಶದ ಪೂರ್ವ, ಪಶ್ಚಿಮ ಮತ್ತು ಉತ್ತರದ ಗಡಿಗಳಲ್ಲಿ ತಲೆದೋರಿರುವ ಅಪಾಯ ಬಗ್ಗೆ ಅವರು ಕುರುಡರಾಗಿದ್ದಾರೆ. ಡೋಕ್ಲಾದಲ್ಲಿ ಚೀನಾವು ಭಾರತದ ಗಡಿಯನ್ನು ದಾಟಿ ಮುಂದೆ ಬರುತ್ತಿದ್ದು ಸೇನಾ ನೆಲೆಗಳ ಮೇಲೆ ಅಧಿಕಾರ ಸಾಧಿಸಲು ಹವಣಿಸುತ್ತಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಗಡಿಯಲ್ಲಿ ಪ್ರತಿದಿನವೂ ನಮ್ಮ ಸೈನಿಕರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News