ಕೆಎಸ್ಸಾರ್ಟಿಸಿ ಬಸ್ ಚಾಲಕರು ಸುರಕ್ಷಿತ ಚಾಲನೆಗೆ ಮಾದರಿ-ಶಕುಂತಳಾ ಶೆಟ್ಟಿ
ಪುತ್ತೂರು, ಫೆ. 3: ಅಪಘಾತ ರಹಿತವಾಗಿ ಬಸ್ ಚಲಾಯಿಸಿ ಜನರ ಪ್ರಾಣ ಉಳಿಸುವುದರೊಂದಿಗೆ ಸೇವಾ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಬಸ್ ಚಾಲಕರನ್ನು ಸನ್ಮಾನಿಸಿ ಗೌರವಿಸುವುದು ಮಹತ್ವದ ವಿಚಾರವಾಗಿದ್ದು, ಕೆಎಸ್ಸಾರ್ಟಿಸಿ ಬಸ್ ಚಾಲಕರು ಸುರಕ್ಷಿತ ಚಾಲನೆಗೆ ಮಾದರಿಯಾಗಿದ್ದಾರೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಅವರು ಶನಿವಾರ ಮುಕ್ರಂಪಾಡಿಯಲ್ಲಿರುವ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಆಯೋಜಿಸಲಾದ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿದರು.
ಸಾರಿಗೆ ಸೇವೆ ನೀಡುವ ಬಸ್ಸುಗಳನ್ನು ಸುರಕ್ಷಿತವಾಗಿ ಚಲಾಯಿಸಿ ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿ ಚಾಲಕನ ಮೇಲಿದೆ. ಅಂತಹ ಅಪಘಾತ ರಹಿತ ಚಾಲನೆ ಮಾಡಿದ ಬಸ್ಸು ಚಾಲಕರನ್ನು ಅಭಿನಂದಿಸುವ ಸಂಪ್ರದಾಯವನ್ನು ಕೆಎಸ್ಸಾರ್ಟಿಸಿ ಪಾಲಿಸುತ್ತಿದೆ. ಇದು ಇತರ ಚಾಲಕರಿಗೂ ಸುರಕ್ಷಿತ ವಾಹನ ಚಾಲನೆಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿ ಮಾತನಾಡಿ, ಪುತ್ತೂರು ಕೆಎಸ್ಸಾರ್ಟಿಸಿಯ ಬೆಳವಣಿಗೆಯಲ್ಲಿ ಸಹೋದ್ಯೋಗಿಗಳು ಕೊಡುಗೆ ಅನನ್ಯ. ಅದೇ ರೀತಿ ಶಾಸಕರು ಕೂಡಾ ಕೆಎಸ್ಸಾರ್ಟಿಸಿ ಬೆಳವಣಿಗೆಯನ್ನು ಸಾಕಷ್ಟು ಶ್ರಮ ವಹಿಸಿದ್ದಾರೆ. ಇಂದು 12 ಮಂದಿ ಚಾಲಕರು ತಮ್ಮ ನಿಸ್ವಾರ್ಥ ಸೇವೆಯಿಂದ ಅಭಿನಂದನೆಗೆ ಅರ್ಹರಾಗಿದ್ದಾರೆ. ನಿಮ್ಮ ಸೇವಾ ದಕ್ಷತೆಯನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯಕ್ರಮ ಇದಾಗಿದ್ದು, ಇದರಿಂದ ನಿಮಗೆ ಉತ್ತಮ ಕೆಲಸ ಮಾಡಲು ಇನ್ನಷ್ಟು ಪ್ರೇರಣೆ ಸಿಗುತ್ತದೆ. ಸಂಸ್ಥೆಯ ಕೆಲಸವೆಂದರೆ ಸಾರ್ವಜನಿಕರ ಕೆಲಸ ಎಂದು ಭಾವಿಸಬೇಕು ಎಂದರು.
ವೇದಿಕೆಯಲ್ಲಿ ವಿಭಾಗೀಯ ಯಾತ್ರಿಕ ಅಭಿಯಂತರ ವೇಣುಗೋಪಾಲ್ ಉಪಸ್ಥಿತರಿದ್ದರು. ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಆಚಾರ್ಯ ಸ್ವಾಗತಿಸಿ, ಸಿಬಂದಿ ಜೈಕರ್ ಶೆಟ್ಟಿ ವಂದಿಸಿದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಡಿಕೇರಿ ವಿಭಾಗದ ಚಾಲಕರಾದ ಎ.ಆರ್. ಸುರೇಶ್, ಸತೀಶ್, ಕೆ.ಟಿ. ಮುಹಮ್ಮದ್, ಪುತ್ತೂರು ವಿಭಾಗದ ಚಾಲಕರಾದ ಚಂದ್ರ ಶೇಖರ್, ಆನಂದ ಗೌಡ ಕೆ, ಬಿ.ಸಿ.ರೋಡ್ ವಿಭಾಗದ ಯತೀಶ್ ಪೂಜಾರಿ, ಬಸಪ್ಪ ಈರಪ್ಪ, ಮೌಲ ಸಾಬ್, ಧರ್ಮಸ್ಥಳ ಎಸ್.ಪಿ. ರತ್ನಾಕರ, ಎಸ್.ಎಸ್. ಹರೀಶ್, ಸುದರ್ಶನ್, ವೆಂಕಪ್ಪ ಗೌಡ ಬೆಳ್ಳಿ ಪದಕಕ್ಕೆ ನೀಡಿ ಸನ್ಮಾನಿಸಲಾಯಿತು ಹಾಗೂ ಸೇವಾ ನಿವತ್ತಿ ಹೊಂದಿದವರಿಗೆ ಮತ್ತು ಮುಖ್ಯಮಂತ್ರಿಯಿಂದ ಚಿನ್ನದ ಪದಕ ಪಡೆದ ಚಾಲಕರನ್ನು ಗೌರವಿಸಲಾಯಿತು.