ನಿಷೇಧಿತ ವಸ್ತು ರಫ್ತಿನಿಂದ 1,282 ಕೋಟಿ ರೂ. ಗಳಿಕೆ !

Update: 2018-02-03 16:47 GMT

ವಿಶ್ವಸಂಸ್ಥೆ, ಫೆ. 3: ಉತ್ತರ ಕೊರಿಯವು ವಿಶ್ವಸಂಸ್ಥೆಯ ದಿಗ್ಬಂಧನಗಳನ್ನು ಉಲ್ಲಂಘಿಸಿದ್ದು, 2017ರಲ್ಲಿ ನಿಷೇಧಿತ ವಸ್ತುಗಳನ್ನು ರಫ್ತು ಮಾಡಿ ಸುಮಾರು 200 ಮಿಲಿಯ ಡಾಲರ್ (ಸುಮಾರು 1,282 ಕೋಟಿ ರೂಪಾಯಿ) ಸಂಪಾದಿಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ವೀಕ್ಷಕರ ಗೌಪ್ಯ ವರದಿಯೊಂದು ಹೇಳಿದೆ.

ಉತ್ತರ ಕೊರಿಯವು ಸಿರಿಯ ಮತ್ತು ಮ್ಯಾನ್ಮಾರ್‌ಗೆ ಶಸ್ತ್ರಾಸ್ತ್ರಗಳನ್ನೂ ಪೂರೈಸುತ್ತಿದೆ ಎಂಬುದಾಗಿಯೂ ವರದಿ ಆರೋಪಿಸಿದೆ.

ಉತ್ತರ ಕೊರಿಯವು ರಶ್ಯ, ಚೀನಾ, ದಕ್ಷಿಣ ಕೊರಿಯ, ಮಲೇಶ್ಯ ಮತ್ತು ವಿಯೆಟ್ನಾಂಗಳು ಸೇರಿದಂತೆ ವಿವಿಧ ದೇಶಗಳ ಬಂದರುಗಳಿಗೆ ಕಲ್ಲಿದ್ದಲನ್ನು ಪೂರೈಸಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಲಾದ 213 ಪುಟಗಳ ವರದಿ ಹೇಳಿದೆ.

  ಉತ್ತರ ಕೊರಿಯವು ನಕಲಿ ದಾಖಲೆಪತ್ರಗಳ ಆಧಾರದಲ್ಲಿ ಹೀಗೆ ಮಾಡಿದೆ ಹಾಗೂ ಸರಕು ರಶ್ಯ ಮತ್ತು ಚೀನಾಗಳಿಂದ ರಫ್ತಾಗುತ್ತಿದೆ ಎಂಬುದಾಗಿ ಈ ದಾಖಲೆ ಪತ್ರಗಳಲ್ಲಿ ತೋರಿಸಲಾಗಿದೆ ಎಂದಿದೆ.

ಉತ್ತರ ಕೊರಿಯದ ಪರಮಾಣು ಮತ್ತು ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮಗಳಿಗೆ ಹರಿದು ಬರುವ ಹಣವನ್ನು ನಿರ್ಬಂಧಿಸುವುದಕ್ಕಾಗಿ 15 ಸದಸ್ಯರ ಭದ್ರತಾ ಮಂಡಳಿಯು 2006ರಿಂದ ಆ ದೇಶದ ಮೇಲೆ ದಿಗ್ಬಂಧನಗಳನ್ನು ವಿಧಿಸುತ್ತಾ ಬಂದಿದೆ. ದಿಗ್ಬಂಧನಕ್ಕೆ ಪೂರಕವಾಗಿ ಆ ದೇಶದ ಕಲ್ಲಿದ್ದಲು, ಕಬ್ಬಿಣದ ಅದಿರು, ಸೀಸದ ಅದಿರು, ಜವಳಿ ಮತ್ತು ಸಾಗರೋತ್ಪನ್ನಗಳ ರಫ್ತನ್ನು ನಿಷೇಧಿಸಲಾಗಿದೆ. ಅದೇ ವೇಳೆ, ಕಚ್ಚಾ ತೈಲ ಮತ್ತು ಶುದ್ಧೀಕೃತ ಪೆಟ್ರೋಲಿಯಂ ಉತ್ಪನ್ನಗಳ ಆಮದಿನ ಮೇಲೆ ಮಿತಿ ಹೇರಲಾಗಿದೆ.

ಸಿರಿಯ, ಮ್ಯಾನ್ಮಾರ್‌ಗೆ ಶಸ್ತ್ರಾಸ್ತ್ರಗಳ ರಫ್ತು

ಸಿರಿಯ ಮತ್ತು ಮ್ಯಾನ್ಮಾರ್ ನಡುವಿನ ಪ್ರಕ್ಷೇಪಕ ಕ್ಷಿಪಣಿ ಸಹಕಾರದ ಬಗ್ಗೆಯೂ ತಾವು ತನಿಖೆ ನಡೆಸಿರುವುದಾಗಿ ವಿಶ್ವಸಂಸ್ಥೆಯ ವೀಕ್ಷಕರು ಹೇಳಿದ್ದಾರೆ.

2012 ಮತ್ತು 2017ರ ನಡುವೆ ಸಿರಿಯದ ವೈಜ್ಞಾನಿಕ ಅಧ್ಯಯನಗಳು ಮತ್ತು ಸಂಶೋಧನಾ ಕೇಂದ್ರಕ್ಕೆ ಉತ್ತರ ಕೊರಿಯದಿಂದ 40ಕ್ಕೂ ಅಧಿಕ ಬಾರಿ ಸರಕು ಸಾಗಣೆಯಾಗಿರುವುದನ್ನು ಪತ್ತೆಹಚ್ಚಿರುವುದಾಗಿಯೂ ಅವರು ಹೇಳಿದ್ದಾರೆ. ಈ ಮೊದಲು ಈ ಸರಕು ಸಾಗಣೆ ವರದಿಯಾಗಿಲ್ಲ.

ಸಿರಿಯದ ವೈಜ್ಞಾನಿಕ ಅಧ್ಯಯನಗಳು ಮತ್ತು ಸಂಶೋಧನಾ ಕೇಂದ್ರವು ದೇಶದ ರಾಸಾಯನಿಕ ಅಸ್ತ್ರ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದೆ.

ಮ್ಯಾನ್ಮಾರ್ ಉತ್ತರ ಕೊರಿಯದಿಂದ ಪ್ರಕ್ಷೇಪಕ ಕ್ಷಿಪಣಿ ವ್ಯವಸ್ಥೆಗಳು ಹಾಗೂ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದೆ ಎನ್ನುವುದಕ್ಕೆ ತನ್ನ ಬಳಿ ಪುರಾವೆಯಿದೆ ಎಂಬುದಾಗಿ ಒಂದು ದೇಶ ಹೇಳಿದೆ ಎಂದು ವರದಿ ಹೇಳಿದೆ. ಆ ದೇಶವನ್ನು ವಿಶ್ವಸಂಸ್ಥೆಯ ವೀಕ್ಷಕರು ಗುರುತಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News