×
Ad

ಮಾಲ್ದೀವ್ಸ್: ಪ್ರತಿಪಕ್ಷ ನಾಯಕರ ಬಿಡುಗಡೆ ವಿಳಂಬ

Update: 2018-02-03 22:22 IST

ಮಾಲೆ (ಮಾಲ್ದೀವ್ಸ್), ಫೆ. 3: ಮಾಲ್ದೀವ್ಸ್‌ನಲ್ಲಿ ಬಂಧನದಲ್ಲಿರುವ ಪ್ರತಿಪಕ್ಷಗಳ ನಾಯಕರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಲ್ಲಿನ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹೊರತಾಗಿಯೂ, ಆದೇಶ ಪಾಲನೆಯನ್ನು ಸರಕಾರ ವಿಳಂಬಿಸಿದೆ. ಅದೇ ವೇಳೆ, ಆದೇಶ ಪಾಲನೆಗೆ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದೆ.

ಒಂಬತ್ತು ಪ್ರತಿಪಕ್ಷಗಳ ನಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಅವರ ವಿರುದ್ಧದ ಮೊಕದ್ದಮೆಗಳ ವಿಚಾರಣೆಯನ್ನು ಹೊಸದಾಗಿ ನಡೆಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿತ್ತು. ಅದೂ ಅಲ್ಲದೆ, ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವರು ಸ್ವತಂತ್ರರು ಎಂದಿತ್ತು.

ಹಿಂದೂ ಮಹಾ ಸಾಗರದ ದ್ವೀಪ ಮಾಲ್ದೀವ್ಸ್‌ನ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಮೊದಲ ಪ್ರಧಾನಿ ಮುಹಮ್ಮದ್ ನಶೀದ್ 2012ರಲ್ಲಿ ಪದಚ್ಯುತಗೊಂಡ ಬಳಿಕ ಆ ದೇಶದಲ್ಲಿ ರಾಜಕೀಯ ಅಶಾಂತಿ ನೆಲೆಸಿದೆ. ಅವರ ವಿರುದ್ಧ ಭಯೋತ್ಪಾದನೆ ಆರೋಪಗಳನ್ನು ಹೊರಿಸಲಾಗಿದ್ದು, 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗ ವೈದ್ಯಕೀಯ ಚಿಕಿತ್ಸೆಯ ಕಾರಣದಲ್ಲಿ ಅವರು ಬ್ರಿಟನ್‌ನಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ.

ಮುಹಮ್ಮದ್ ನಶೀದ್ ಮತ್ತು ಇತರ 8 ಪ್ರತಿಪಕ್ಷ ನಾಯಕರ ವಿರುದ್ಧದ ಮೊಕದ್ದಮೆಗಳು ಸಂವಿಧಾನ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅವರ ವಿರುದ್ಧ ‘ರಾಜಕೀಯ ಪ್ರೇರಿತ’ ವಿಚಾರಣೆಗಳನ್ನು ನಡೆಸಲು ಪ್ರಾಸಿಕ್ಯೂಟರ್‌ಗಳು ಮತ್ತು ನ್ಯಾಯಾಧೀಶರ ಮೇಲೆ ಅನುಚಿತ ಪ್ರಭಾವವನ್ನು ಬೀರಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಾಧೀಶರ ಜೊತೆ ಅಟಾರ್ನಿ ಜನರಲ್ ಮಾತುಕತೆ

ಭಯೋತ್ಪಾದನೆ ಮತ್ತು ದೇಶದ್ರೋಹದ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳ ಬಿಡುಗಡೆಯ ವಿಷಯದಲ್ಲಿ ಸರಕಾರದ ಕಳವಳದ ಬಗ್ಗೆ ಮುಖ್ಯ ನ್ಯಾಯಾಧೀಶ ಅಬ್ದುಲ್ಲಾ ಸಯೀದ್ ಜೊತೆ ತಾನು ಶುಕ್ರವಾರ ಮಾತುಕತೆ ನಡೆಸಿದ್ದೇನೆ ಎಂದು ಅಟಾರ್ನಿ ಜನರಲ್ ಮುಹಮ್ಮದ್ ಅನಿಲ್ ಹೇಳಿದರು.

 ‘‘ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಉತ್ತಮ ಕ್ರಮಗಳನ್ನು ನಿರ್ಧರಿಸಲು, ಪ್ರಾಸಿಕ್ಯೂಟರ್ ಜನರಲ್ ಈಗ ಮೊಕದ್ದಮೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಅವರು ಶೀಘ್ರವೇ ಶಿಫಾರಸುಗಳನ್ನು ಸಲ್ಲಿಸಲಿದ್ದಾರೆ’’ ಎಂದು ಸರಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News