ಸರ್ವ ಧರ್ಮ ಸಮನ್ವಯತೆ ರಾಣಿ ಅಬ್ಬಕ್ಕ ದೇವಿ ನೀಡಿದ ಸಂದೇಶ: ವೈದೇಹಿ

Update: 2018-02-03 17:07 GMT

ಮಂಗಳೂರು, (ಅಬ್ಬಕ್ಕ ಉತ್ಸವ ವೇದಿಕೆ ಕೊಲ್ಯ), ಫೆ.3: ಸರ್ವ ಧರ್ಮ ಸಮನ್ವಯತೆ ರಾಣಿ ಅಬ್ಬಕ್ಕ ದೇವಿ ನೀಡಿದ ಸಂದೇಶವಾಗಿದೆ.ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡಿಕೊಳ್ಳದೆ ಇದ್ದರೆ ಅಬ್ಬಕ್ಕನ ಹೆಸರಿನಲ್ಲಿ ನಡೆಯುವ ಉತ್ಸವಗಳಿಗೆ ಅರ್ಥವಿರುವುದಿಲ್ಲ ಎಂದು ಖ್ಯಾತ ಲೇಖಕಿ ವೈದೇಹಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಕೊಲ್ಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ಅಬ್ಬಕ್ಕ ಉತ್ಸವ 2017-18ನ್ನು ಅವರು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಾದರಿಗಳಿಲ್ಲದೆ ಬದುಕುತ್ತಿರುವ ನಮಗೆ ರಾಣಿ ಅಬ್ಬಕ್ಕ ದೇವಿ ಉತ್ತಮ ಮಾದರಿ ಮಹಿಳೆ:- ಅಬ್ಬಕ್ಕ ಕೇವಲ ಕರಾವಳಿಗಲ್ಲ ಈ ದೇಶಕ್ಕೆ ರಾಣಿಯಾಗಿ, ಮಹಿಳೆಯಾಗಿ ಮಾದರಿಯಾಗಿದ್ದಾಳೆ. ಆಕೆ ತನ್ನ ಆಡಳಿತ ವ್ಯಾಪ್ತಿಯ ಎಲ್ಲಾ ಜನರನ್ನು ಜಾತಿ, ಮತ ಬೇಧವಿಲ್ಲದೆ ಸಮಾನತೆಯಿಂದ ತನ್ನ ಮಕ್ಕಳಂತೆ ಕಂಡ ಮಹಿಳೆ. ಆಕೆ ರಾಣಿಯಾಗಿದ್ದರೂ ಸಾಮಾನ್ಯರಂತೆ, ರೈತರಂತೆ ಬರಿಗಾಲಲ್ಲಿ ಪೇಟೆಗೆ ಬರುತ್ತಿದ್ದಳು, ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದಳು ರಾಣಿಯೆಂದು ಜನರಿಂದ ದೂರ ಇರಲಿಲ್ಲ. ಆಕೆ ಆ ಅಂತರವನ್ನು ಮಿರಿ ಬೆಳೆದಿದ್ದಳು. ಎಲ್ಲರೂ ಆಕೆಗೆ ಬೇಕಾಗಿತ್ತು, ಎಲ್ಲರನ್ನು ಪ್ರೀತಿಯಿಂದ ಕಂಡವಳು. ಉಳ್ಳಾಲದಂತಹ ಸಣ್ಣ ರಾಜ್ಯದಲ್ಲಿ ಹಿಂದೂಗಳು, ಮುಸಲ್ಮಾನರು ಎನ್ನದೆ ಎಲ್ಲರನ್ನು ಒಟ್ಟು ಸೇರಿಸಿಕೊಂಡು ಸೇನೆ ಕಟ್ಟಿಕೊಂಡು ಪೂರ್ಚುಗೀಸರೊಂದಿಗೆ ಹೋರಾಡಿದ ಮಹಿಳೆ  ಆದರೆ ಇಷ್ಟೆಲ್ಲಾ ನೀಡಿದ ಆಕೆಗೆ ನಾವೇನು ನೀಡಿದ್ದೇವೆ ಇಲ್ಲಿನ ಈಗಿನ ಸ್ಥಿತಿಯ ಬಗ್ಗೆ ಬೇಸರವಾಗುತ್ತದೆ ಎಂದು ವೈದೇಹಿ ತಿಳಿಸಿದರು.

ಅಬ್ಬಕ್ಕ ಉತ್ಸವ ಕೇವಲ ವೈಭವಕ್ಕಲ್ಲ:- ಆಕೆ ತನ್ನ ನೆಲದ ಸ್ವಾತಂತ್ರಕ್ಕಾಗಿ ನಡೆಸಿದ ಹೋರಾಟ ಉಳ್ಳಾಲ ಅಲ್ಲದೆ ಬೇರೆ ಕಡೆಯಾಗಿದ್ದರೆ ಆಕೆ ಹೋರಾಟ ಚರಿತ್ರೆಯ ಪುಟಗಳಲ್ಲಿ ದಾಖಲಾಗಿ ಹೆಚ್ಚು ಪ್ರಚಾರವಾಗುತ್ತಿತ್ತು. ಆಕೆಯ ಹೆಸರಿನಲ್ಲಿ ಲಾವಣಿಗಳು ಹುಟ್ಟಿಕೊಳ್ಳುತ್ತಾ ಇತ್ತು. ಆದರೆ ಇಲ್ಲಿ ಅದು ಆಗಲಿಲ್ಲ. ಇನ್ನು ಮುಂದಾದರೂ ಇಂತಹ ಮಹಾನ್ ಚೇತನದ ಬಗ್ಗೆ ನಮ್ಮೆಳಗಿರುವ ಪ್ರೇರಕ ಶಕ್ತಿ, ಆ ಸ್ಫೂರ್ತಿಯ ಸೆಲೆ ಬತ್ತಿ ಹೋಗದೆ ಇರಬೇಕಾದರೆ ಆಕೆಯ ಸ್ಮರಣೆ ಮಾಡಬೇಕಾಗಿದೆ. ಆಕೆಯ ಉತ್ಸವ ಕೇವಲ ವೈಭವಕ್ಕಲ್ಲ. ಆಕೆಯ ಬಗ್ಗೆ ನಾಟಕ, ಹಾಡು ಸೃಷ್ಟಿಯಾಗ ಬೇಕಾಗಿದೆ. ಆಕೆಯ ಹೆಸರಿನಲ್ಲಿ ಸಿನಿಮಾ ಆಗಬೇಕಾಗಿದೆ ಎಂದು ವೈದೇಹಿ ತಿಳಿಸಿದರು.

ಅಬ್ಬಕ್ಕ ನಿರಂತರವಾಗಿ ಒಂದಲ್ಲ ಒಂದು ಯುದ್ದದಲ್ಲಿ ತೊಡಗಿಕೊಂಡಿದ್ದಳು. ತನ್ನ ಗಂಡನಿಂದಲೇ ಅನ್ಯಾಯಕ್ಕೆ ಒಳಗಾಗಿ ಆತನ ವಿರುದ್ಧವೇ ಹೋರಾಡ ಬೇಕಾಗಿ ಬಂದ ಚರಿತ್ರೆ ಭಾರತದ ಇತಿಹಾಸದಲ್ಲಿ ಇನ್ನೊಂದು ಇರಲಾರದು ಎಂದು ವೈದೇಹಿ ತಿಳಿಸಿದರು.

ಯಾವ ಭಾಷೆಯಲ್ಲಿ ಮಕ್ಕಳು ಓದಬೇಕು ಎನ್ನುವುದಕ್ಕೂ ಅಬ್ಬಕ್ಕ ಮಾದರಿ:- ಮಕ್ಕಳು ಯಾವ ಭಾಷೆಯಲ್ಲಿ ಓದಬೇಕು ಎನ್ನುವ ಬಗ್ಗೆ ಅಬ್ಬಕ್ಕನಿಗೆ ಸ್ಪಷ್ಟ ನಿಲುವು ಇತ್ತು. ಆ ಕಾರಣದಿಂದ ಆಕೆಯ ರಾಜ್ಯದಲ್ಲಿ ಹಲವು ಭಾಷೆಗಳನ್ನು ಆಡುವ ಮಂದಿ ಸಾಮರಸ್ಯದಿಂದ ಬದುಕಿದ್ದರು. ಈ ಮಾದರಿ ನಮಗೆ ನಮ್ಮ ಸರಕಾರಕ್ಕೆ ಬೇಕಾಗಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿ ಖಾಸಗಿಯವರಿಗೆ ಆಂಗ್ಲಮಾಧ್ಯಮ ಶಾಲೆ ನಡೆಸಲು ಅವಕಾಶ ನೀಡುವುದೆಂದರೆ ಸರಕಾರ ಒಂದು ರೀತಿಯಲ್ಲಿ ಸೋತಂತೆ ಎಂದು ವೈದೇಹಿ ಹೇಳಿದರು. ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಲಿಗೆ ಅವಕಾಶ ಮಾಡಿಕೊಡುವುದಕ್ಕೆ ಮೊದಲ ಆಧ್ಯತೆ ನೀಡಬೇಕಾಗಿದೆ ಎಂದರು.

ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ರಾಜ್ಯ ಸಚಿವ ಯು.ಟಿ.ಖಾದರ್ ಧ್ವಜಾರೋಹಣ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಲೇಖಕಿ ರೂಪಾ ಆಯ್ಯರ್ ವಿವಿಧ ಗೋಷ್ಠಿಗಳನ್ನ ಉದ್ಘಾಟಿಸಿದರು. ಚಲನ ಚಿತ್ರ ನಟಿ ಭಾವನ ರಾಮಣ್ಣ ಸಾಂಸ್ಕೃತಿಕ ಕಾರ್ಯಕ್ರಮಗಳ ಗೋಷ್ಠಿಯನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಮೆರವಣಿಗೆಗೆ ಚಾಲನೆ ನೀಡಿದರು. ಉತ್ಸ ವ ಸಮಿತಿಯ ಉಸ್ತುವಾರಿ ಮುಖಂಡರಾದ ದಿನಕರ ಉಳ್ಳಾಲ ಸ್ವಾಗತಿಸಿದರು. ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಉಳ್ಳಾಲ ನಗರ ಸಭೆಯ ಅಧ್ಯಕ್ಷ ಕುಂಞ ಮೋನು, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ಮಮತಾ ಗಟ್ಟಿ, ಸಂತೋಷ್ ಕುಮಾರ್ , ಗಟ್ಟಿ ಸಮಾಜದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ವಿಶೇಷ ಆಹ್ವಾನಿತರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವ ಉಳ್ಳಾಲ್, ಸೀತಾರಾಮ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಭಾಸ್ಕರ ರೈ ಕುಕ್ಕುವಳ್ಳಿ, ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News