ಮಂಗಳೂರು: ದರೋಡೆ, ಕೊಲೆಗೆ ಸಂಚು; ರೌಡಿ ಶೀಟರ್ ಸಹಿತ ನಾಲ್ವರ ಬಂಧನ

Update: 2018-02-03 17:15 GMT

ಮಂಗಳೂರು, ಫೆ. 4: ನಗರದ ಫಳ್ನೀರ್ ಬಳಿಯಲ್ಲಿ ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದರೆನ್ನಲಾದ ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸುವಲ್ಲಿ ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಯಶಸ್ವಿಯಾಗಿದ್ದಾರೆ.

ತೊಕ್ಕೊಟ್ಟು ಒಳಪೇಟೆ ನಿವಾಸಿ ಮನೋಜ್ ಕುಮಾರ್ (33), ಮೊಗವೀರಪಟ್ಣ ಬೀಚ್ ಬಳಿಯ ನಿವಾಸಿ ಪ್ರಸಾದ್ ಯಾನೆ ಪಚ್ಚು (28), ಮೊಗವೀರಪಟ್ಣ ವ್ಯಾಘ್ರ ಚಾಮುಂಡೇಶ್ವರಿ ದೇವಳದ ಬಳಿಯ ನಿವಾಸಿ ಶ್ರವಣ್ (22), ತೊಕ್ಕೊಟ್ಟು ಭಟ್ ನಗರ ನಿವಾಸಿ ಸುಜಿತ್ (27) ಬಂಧಿತ ಆರೋಪಿಗಳು.

ನಗರದ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಫಳ್ನೀರ್ ಎಂಬಲ್ಲಿ ಟಾಟಾ ಸುಮೋ ವಾಹನವೊಂದರಲ್ಲಿ ಬಂದ 9-10 ಮಂದಿ ಯುವಕರು ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ತಲವಾರು, ಮಚ್ಚು, ಚೂರಿ, 40 ಗ್ರಾಂ ಗಾಂಜಾ ಮತ್ತು 3 ಮೊಬೈಲ್ ಫೋನ್, ಟಾಟಾ ಸುಮೋ ಕಾರು ಸೇರಿದಂತೆ ಒಟ್ಟು 1,19,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ ಪೈಕಿ ಪ್ರಸಾದ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣ, 3 ಕೊಲೆಯತ್ನ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿರುತ್ತದೆ. ಆತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ.

ಆರೋಪಿಗಳಾದ ಶ್ರವಣ್ ಹಾಗೂ ಮನೋಜ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತಾರಾಮ್ ಮತ್ತು ಸಿಬ್ಬಂದಿ  ಕಾರ್ಯಾಚರಣೆ ನಡೆಸಿ ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News