ಮೃತ ರಾಮಚಂದ್ರ ನಾಯ್ಕ ಮನೆಗೆ ಭೇಟಿ ನೀಡಿದ ಸಚಿವ ಅನಂತ್ ಕುಮಾರ್ ಹೆಗಡೆ
ಭಟ್ಕಳ, ಫೆ. 3: ಪುರಸಭೆ ಅಂಗಡಿ ಮಳಿಗೆ ವಿವಾದದಲ್ಲಿ ತನ್ನ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದ ಆಸರಕೇರಿ ಯಲ್ಲಿನ ರಾಮಚಂದ್ರ ನಾಯ್ಕ ಮನೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಪಕ್ಷದ ವತಿಯಿಂದ ಸಂಗ್ರಹಿಸಿದ 1 ಲಕ್ಷ ರೂಪಾಯಿ ಮೊತ್ತದ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಚಂದ್ರ ನಾಯ್ಕ ಸಹೋದರ ಮಂಜುನಾಥ ನಾಯ್ಕ ಸಚಿವರಿಗೆ ಮನವಿಯೊಂದನ್ನು ಸಲ್ಲಿಸಿ, ನಮ್ಮ ಕುಟುಂಬದ ಸದಸ್ಯರ ಮೇಲೆ ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ಬಗ್ಗೆ ಪೊಲೀಸ್ ದೂರನ್ನೂ ಸಹ ನೀಡಲಾಗಿದೆ. ಆದರೆ ಈವರೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ನನ್ನ ಗಮನಕ್ಕೆ ಬಂದಿಲ್ಲ, ಈ ಕುರಿತು ಪರಿಶೀಲಿಸಿ ಕ್ರಮಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಮುಖಂಡರಾದ ಕೃಷ್ಣನಾಯ್ಕ ಆಸರಕೇರಿ, ಸುನೀಲ್ ನಾಯ್ಕ, ಪರಮೇಶ್ವರ ದೇವಾಡಿಗ, ಪ್ರಮೋದ ಜೋಷಿ, ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್ ನಾಯ್ಕ, ರಾಮಚಂದ್ರ ನಾಯ್ಕ ಸಹೋದರರಾದ ವೆಂಕಟೇಶ ನಾಯ್ಕ, ಈಶ್ವರ ನಾಯ್ಕ, ತಾಯಿ ಮಾದೇವಿ ಇನ್ನಿತರರು ಉಪಸ್ಥಿತರಿದ್ದರು.