ಕುಂದಾಪುರ: ಫ್ಯಾನ್ಸಿ ಅಂಗಡಿಯಲ್ಲಿ ಅಗ್ನಿ ಅವಘಡ; ಅಪಾರ ನಷ್ಟ
ಕುಂದಾಪುರ, ಫೆ. 3 : ಹೊಸ ಬಸ್ ನಿಲ್ದಾಣ ಸಮೀಪ ಜಗನ್ನಾಥ್ ಎಂಬುವರ ರೇಷ್ಮಾ ಎನ್ನುವ ಫ್ಯಾನ್ಸಿ ಹಾಗೂ ಗಿಫ್ಟ್, ಜೆರಾಕ್ಸ್ ಅಂಗಡಿಯಲ್ಲಿ ಶನಿವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಸುಮಾರು ನಾಲ್ಕುವರೆ ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಂಜೆ ಮಾಲಕರು ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದು, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಲ್ಲಿದ್ದ ವಸ್ತುಗಳಿಗೆ ಬೆಂಕಿ ಕಾಣಿಸಿಕೊಂಡಿದ್ದು, ಮಳಿಗೆಯ ಒಳಗಿ ನಿಂದ ಹೊಗೆ ಬರಲಾರಂಭಿಸಿದ್ದು, ಕೂಡಲೇ ಅಕ್ಕ-ಪಕ್ಕದ ಅಂಗಡಿಯವರು, ಪ್ರತ್ಯಕ್ಷದರ್ಶಿಗಳೆಲ್ಲ ಸೇರಿ ಫ್ಯಾನ್ಸಿ ಅಂಗಡಿಯ ಬಾಗಿಲು ಒಡೆದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ 2 ದೊಡ್ಡ ಜೆರಾಕ್ಸ್ ಯಂತ್ರಗಳು, ಗಿಫ್ಟ್ ಸಾಮಗ್ರಿಗಳು, ಸ್ಟೇಶನರಿ ಸೊತ್ತುಗಳೆಲ್ಲ ಬೆಂಕಿಗೆ ಆಹುತಿಯಾಗಿದ್ದವು.
ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಹೆಚ್ಚಿನ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.