ಮುಹಮ್ಮದ್ ಕುಂಞಿ ಅವರಿಗೆ 'ಇಂಟರ್ ನ್ಯಾಷನಲ್ ಪೀಸ್ ಅವಾರ್ಡ್ -2018'
ಮಂಗಳೂರು, ಫೆ. 3: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷರು ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕರೂ ಆಗಿರುವ, ಖ್ಯಾತ ಭಾಷಣಕಾರರಾಗಿ ಗುರುತಿಸಿಕೊಂಡಿರುವ ಮುಹಮ್ಮದ್ ಕುಂಞಿ ಅವರಿಗೆ 'ಇಂಟರ್ ನ್ಯಾಷನಲ್ ಪೀಸ್ ಅವಾರ್ಡ್ -2018' ಲಭಿಸಿದೆ.
ಸಮಾಜದಲ್ಲಿ ಶಾಂತಿಗಾಗಿ ಕೆಲಸ ಮಾಡುವ ಹಾಗೂ ಸಾಮಾಜಿಕ ಕೆಲಸಗಳನ್ನು ಪ್ರೋತ್ಸಾಹಿಸಲು ದುಬೈಯ ಎಚ್ಎಮ್ ಸಿ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ನೀಡಲಾಗುವ ಈ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದುಬೈನಲ್ಲಿರುವ ಶೇಖ್ ರಾಶಿದ್ ಆಡಿಟೋರಿಯಂ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಹಮ್ಮದ್ ಕುಂಞಿ ಅವರ ಪರವಾಗಿ ಅನಿವಾಸಿ ಭಾರತೀಯ ಅಬ್ದುಸ್ಸಲಾಂ ದೇರಳಕಟ್ಟೆ ಈ ಪ್ರಶಸ್ತಿಯನ್ನು ಪಡೆದುಕೊಂಡರು.
ಮುಹಮ್ಮದ್ ಕುಂಞಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಸಲಹಾ ಸಮಿತಿಯ ಸದಸ್ಯರು ಕೂಡಾ ಆಗಿದ್ದು, ಇಸ್ಲಾಮೀ ಹಾಗೂ ಸಾಮಾಜಿಕ ಮೌಲ್ಯವುಳ್ಳ ಪುಸ್ತಕಗಳನ್ನು ಪ್ರಕಟಿಸುವ ಶಾಂತಿ ಪ್ರಕಾಶನ ಸಂಸ್ಥೆ ಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕದ ಹಲವಾರು ಕಡೆಗಳಲ್ಲಿ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮಗಳನ್ನು ನಡೆಸಿದ್ದು, ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.