ಮುಲಾರಪಟ್ನ: ಅಕ್ರಮ ಮರಳು ಅಡ್ಡೆಗೆ ದಾಳಿ; ಎಂಟು ಮಂದಿ ಆರೋಪಿಗಳು ಸೆರೆ
ಬಂಟ್ವಾಳ, ಫೆ. 4: ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಪೋಲಿಸರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಸಹಿತ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಲಾರಪಟ್ನದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಮುಲಾರಪಟ್ನ ಫಲ್ಗುಣಿ ನದಿ ತಟದಲ್ಲಿ ಕೆಲವು ದಿನಗಳಿಂದ ಯಾಂತ್ರೀಕೃತ ದೋಣಿಗಳನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯ ಲಾಗುತ್ತಿತ್ತು ಎನ್ನಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಎಎಸ್ಪಿ ಸಜಿತ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ನಾಗರಾಜ ಮತ್ತು ಬಂಟ್ವಾಳ ಗ್ರಾಮಾಂತರ ಉಪನಿರೀಕ್ಷಕ ಪ್ರಸನ್ನ ಅವರ ನೇತೃತ್ವದ ತಂಡ ದಾಳಿ ನಡೆಸಿ, ನಾಲ್ಕು ಲಾರಿಗಳು, 10 ನಾಡದೋಣಿಗಳ ಸಹಿತ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ಸುಮಾರು 15 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ರವಿಕಾಂತೇಗೌಡ, ಎಎಸ್ಪಿ ಸಜಿತ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಸೂಚನೆಯ ಮೇರೆಗೆ ಕಂದಾಯ ಸಿಬ್ಬಂದಿ ಮತ್ತು ಬಂಟ್ವಾಳ ಗ್ರಾಮಾಂತರ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಮುಲಾರಪಟ್ನ ಫಲ್ಗುಣಿ ನದಿ ತಟದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಹಲವು ಬಾರಿ ದಾಳಿ ನಡೆಸಲಾಗಿತ್ತು. ಅದರೆ ಮತ್ತೆ ಮತ್ತೆ ಅಕ್ರಮ ಮರಳುಗಾರಿಕೆ ಮುಂದುವರಿಯುತ್ತಲೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಬಾರಿ ಇದೇ ಪ್ರದೇಶದಲ್ಲಿ ಅಕ್ರಮ ಮರಳು ಅಡ್ಡೆಗೆ ದಾಳಿ ಮಾಡಿದ ಸಂದರ್ಭ ಮರಳುಗಾರಿಕೆಯ ಕೆಲಸಗಾರ ನದಿಗೆ ಹಾರಿ ಜೀವ ಕಳೆದುಕೊಂಡ ಘಟನೆ ನಡೆದಿತ್ತು.