×
Ad

ಎನ್‌ಡಿಎ ಸರಕಾರ ‘ಅಸಹನೀಯ ರೋಗಿ’ : ಚಿದಂಬರಂ

Update: 2018-02-04 17:44 IST

ಹೊಸದಿಲ್ಲಿ, ಫೆ.4: ಮೋದಿ ನೇತೃತ್ವದ ಎನ್‌ಡಿಎ ಸರಕಾರ ತನ್ನ ರೋಗನಿಶ್ಚಯವನ್ನು ತಾನೇ ಮಾಡಿಕೊಳ್ಳುವ ‘ಅಸಹನೀಯ ರೋಗಿ’ ಇದ್ದಂತೆ ಎಂದು ಮಾಜಿ ವಿತ್ತ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಟೀಕಿಸಿದ್ದಾರೆ.

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರೊಬ್ಬ ‘ ಉತ್ತಮ ಡಾಕ್ಟರ್’ ಆಗಿದ್ದಾರೆ. ಆದರೆ ಆರ್ಥಿಕ ಪರಿಸ್ಥಿತಿ ಕುರಿತಂತೆ ಈ ‘ಡಾಕ್ಟರ್’ ನೀಡುವ ಸಲಹೆಗಳನ್ನು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ದೇಶದ ವಾಸ್ತವಿಕ ಆರ್ಥಿಕ ಪರಿಸ್ಥಿತಿಯನ್ನು ಕೇಂದ್ರ ಸರಕಾರ ನಿರಾಕರಿಸುತ್ತಲೇ ಬಂದಿದೆ. ಕೃಷಿ ಕ್ಷೇತ್ರದಲ್ಲಿರುವ ಬೇಗುದಿ, ನಿರುದ್ಯೋಗ ಪರಿಸ್ಥಿತಿಯನ್ನೂ ನಿರಾಕರಿಸುತ್ತಿರುವ ಸರಕಾರ, ವಿಪಕ್ಷಗಳ ವಾದವನ್ನೂ ನಿರಾಕರಿಸುತ್ತಿದೆ. ಇದೀಗ ತಾನು 2014ರಲ್ಲಿ ನೇಮಕಗೊಳಿಸಿದ ‘ಡಾಕ್ಟರ್’ ಚಿಕಿತ್ಸಾಕ್ರಮದ ಕುರಿತು ನೀಡುತ್ತಿರುವ ಸಲಹೆಗಳನ್ನೂ ನಿರಾಕರಿಸುತ್ತಿದೆ ಎಂದು ಟೀಕಿಸಿದರು. ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರು ರೋಗಿಯನ್ನು ದಿನಂಪ್ರತಿ ಪರೀಕ್ಷಿಸಿ ಚಿಕಿತ್ಸಾಕ್ರಮಗಳನ್ನು ಸೂಚಿಸುವ ಡಾಕ್ಟರ್ ಇದ್ದಂತೆ. ಆದರೆ ‘ಅಸಹನೀಯ ರೋಗಿ’ಗಳು, ವೈದ್ಯರು ಸೂಚಿಸಿದ ಚಿಕಿತ್ಸಾ ವಿಧಾನವನ್ನು ಪರಿಗಣಿಸದೆ, ತನ್ನ ಚಿಕಿತ್ಸಾ ವಿಧಾನವನ್ನು ತಾನೇ ನಿರ್ಣಯಿಸಿಕೊಳ್ಳುತ್ತಾರೆ. ಕೇಂದ್ರ ಸರಕಾರ ಈ ವರ್ಗಕ್ಕೆ ಸೇರುತ್ತದೆ ಎಂದು ಚಿದಂಬರಂ ವಿಶ್ಲೇಷಿಸಿದರು.

ಬಜೆಟ್ ಎಂಬುದು ಸುಧಾರಣಾ ಪ್ರಕ್ರಿಯೆಯ ಸ್ಥೂಲ ವಿವರಣೆ ನೀಡುವ ಅವಕಾಶವಾಗಿದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಕೆಲವು ಮಹಾತ್ವಾಕಾಂಕ್ಷೆಯ ಸುಧಾರಣೆಯ ಬಗ್ಗೆ ಅತಿಶಯೋಕ್ತಿಯ ಹೇಳಿಕೆ ಬಿಟ್ಟರೆ ಬೇರೇನೂ ಇಲ್ಲ ಎಂದು ಟೀಕಿಸಿದ ಚಿದಂಬರಂ, ಆರ್ಥಿಕ ಸಮೀಕ್ಷೆಯಲ್ಲಿ ನಾಲ್ಕು ‘ಆರ್’(ರಿಕಗ್ನಿಷನ್, ರೆಸೊಲ್ಯುಷನ್, ರಿಕ್ಯಾಪಿಟಲೈಸೇಷನ್ ಹಾಗೂ ರಿಫಾರ್ಮ್ಸ್)ಗಳ ಒತ್ತು ನೀಡಲಾಗಿದೆ. ಇದರಲ್ಲಿ ಮೊದಲ ಮೂರನ್ನು ಸಾಧಿಸಲಾಗಿದ್ದರೂ ಬ್ಯಾಂಕಿಂಗ್ ಸುಧಾರಣೆ ಇನ್ನೂ ಸಾಧ್ಯವಾಗಿಲ್ಲ ಎಂದರು. ಇತ್ತೀಚಿನ ದಿನಗಳಲ್ಲಿ ರಫ್ತು ಪ್ರಕ್ರಿಯೆಯಲ್ಲಿ ಆಗಿರುವ ಸಾಮಾನ್ಯ ಹೆಚ್ಚಳದಿಂದ ಸರಕಾರ ನೆಮ್ಮದಿಗೊಂಡಿರುವಂತೆ ಕಾಣುತ್ತಿದೆ. ಆದರೆ ವಾಣಿಜ್ಯ ಸರಕು ರಫ್ತು ಕೆಲ ವರ್ಷದ ಹಿಂದೆ ಇದ್ದ ಪ್ರಮಾಣಕ್ಕೆ ಇನ್ನೂ ಮರಳಿಲ್ಲ. ತೆರಿಗೆ-ಜಿಡಿಪಿ ಪ್ರಮಾಣ 1980ರಲ್ಲಿ ಇದ್ದ ಪ್ರಮಾಣಕ್ಕಿಂತ ಹೆಚ್ಚೇನಿಲ್ಲ ಎಂದು ಚಿದಂಬರಂ ಹೇಳಿದರು.

 ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಜಾರಿಯ ಬಳಿಕ ತೆರಿಗೆ ಸಂಗ್ರಹದ ಪ್ರಮಾಣ ಎಷ್ಟಿದೆ ಹಾಗೂ ಮುಂದಿನ ವರ್ಷದ ಅಂದಾಜು ಪ್ರಮಾಣದ ಬಗ್ಗೆ ಕುತೂಹಲವಿದೆ ಎಂದು ಚಿದಂಬರಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News