×
Ad

ಭಾರತ್ ಸ್ಕೌಟ್ಸ್-ಗೈಡ್ಸ್ ಮೂಲಕ ಶಿಸ್ತುಬದ್ಧ, ಕೌಶಲ್ಯಯುತ ಬದುಕು ದೊರೆಯುತ್ತದೆ: ಡಿಸಿ ಸಸಿಕಾಂತ್ ಸೆಂಥಿಲ್

Update: 2018-02-04 18:06 IST

ಮಂಗಳೂರು, ಫೆ.4: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ದ.ಕ.ಜಿಲ್ಲಾಧಿಕಾರಿ ಬಂಗಲೆಯಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ತೃತೀಯ ಸೋಪಾನ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನಗೈದು ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಶಿಸ್ತುಬದ್ಧ, ಕೌಶಲ್ಯಯುತ ಬದುಕು ದೊರೆಯುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರ್ಪಡೆ ಮಾಡಲು ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದರು.

ಸುಂದರ ಬದುಕು ಹಾಗೂ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಸ್ತು, ಕೌಶಲ್ಯ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆ ಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಗೊಳ್ಳುವ ಜತೆಗೆ ವಿದ್ಯಾರ್ಥಿ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನುಡಿದರು.

ಖಾಸಗಿ ಶಾಲೆಗಳ ಮಕ್ಕಳೇ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸರಕಾರಿ ಶಾಲೆಗಳಿಗೂ ವಿಸ್ತರಣೆಯಾಗಿ ಸಮಾಜದ ಎಲ್ಲ ವರ್ಗದವರಿಗೆ ಅವಕಾಶ ಲಭಿಸಿದಾಗ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮೂಲ ಆಶಯ ಈಡೇರುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ. ಮೋಹನ್ ಪ್ರಾಸ್ತಾವಿಕ ಮಾತನಾಡಿ ರಾಜ್ಯದಲ್ಲಿ 4.50 ಲಕ್ಷ ಮಕ್ಕಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿದ್ದಾರೆ. 4.50 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹಾಕಿಕೊಂಡು ಮುನ್ನಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 1 ಲಕ್ಷ ಮಕ್ಕಳನ್ನು ಸೇರಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಸ್ಕೌಟ್ಸ್ ಆರಂಭಿಸಲು ಮತ್ತು ಇರುವ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರ್ಪಡೆಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂದರು.

ಮಕ್ಕಳಲ್ಲಿ ಸ್ಕೌಟ್ಸ್ ಬಗ್ಗೆ ಆಸಕ್ತಿ ಮೂಡಿಸಲು ಅಂಗನವಾಡಿಯಿಂದಲೇ ತರಬೇತಿ ನೀಡಲಾಗುತ್ತಿದೆ. 50 ಶಿಕ್ಷಕರಿಗೆ ಬನ್ನೀಸ್ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರು ಮೊದಲಾದ ಕಡೆ ಪ್ರಾಥಮಿಕ ತರಬೇತಿ ನಡೆಸಲು ಉದ್ದೇಶಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಮುತುವರ್ಜಿ ವಹಿಸಿ ಎಲ್ಲ ಶಾಲೆಗಳ ಶಿಕ್ಷಕರು ಕಡ್ಡಾಯವಾಗಿ ಸ್ಕೌಟ್ಸ್ ಮೂಲ ತರಬೇತಿ ಪಡೆಯಲು ವ್ಯವಸ್ಥೆ ಮಾಡಬೇಕು ಎಂದು ಎನ್.ಜಿ.ಮೋಹನ್ ಒತ್ತಾಯಿಸಿದರು.

ಎಸೆಸೆಲ್ಸಿ ಅತ್ಯಧಿಕ ಅಂಕ ಗಳಿಸಿದ ಲೇಡಿಹಿಲ್ ವಿಕ್ಟೋರಿಯಾ ಶಾಲೆಯ ಸ್ವಾತಿ ಭಟ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಗೈಡ್ಸ್ ಜಿಲ್ಲಾ ಆಯುಕ್ತ ಐರಿನ್ ಡಿಕುನ್ನ, ಜಿಲ್ಲಾಧಿಕಾರಿಯ ತಂದೆ ನ್ಯಾ.ಷಣ್ಮುಗಂ ಹಾಗೂ ತಾಯಿ ಅಂಬಿಕಾ, ಶಾರದಾ ಆಚಾರ್, ವಸಂತ ರಾವ್ ಉಪಸ್ಥಿತರಿದ್ದರು.

ಸ್ಕೌಟ್ಸ್ ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಯು. ಗೋಪಾಲಕೃಷ್ಣ ಭಟ್ ವಂದಿಸಿದರು. ಎಂ.ಜಿ.ಕಜೆ ಕಾರ್ಯಕ್ರಮ ನಿರೂಪಿಸಿದರು.

154 ಶಾಲೆಗಳ 1,223 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ

ತೃತೀಯ ಚರಣ ಕಬ್ಸ್ 27 ಶಾಲೆಗಳಿಂದ 278 ಕಬ್ಸ್, ಸುವರ್ಣ ಪಂಖ್ ಬುಲ್‌ಬುಲ್ಸ್ 25 ಶಾಲೆಗಳಿಂದ 302 ಬುಲ್‌ಬುಲ್ಸ್, ತೃತೀಯ ಸೋಪಾನ ಸ್ಕೌಟ್ಸ್ 38 ಶಾಲೆಗಳಿಂದ 267 ಸ್ಕೌಟ್ಸ್, ತೃತೀಯ ಸೋಪಾನ ಗೈಡ್ಸ್ 52 ಶಾಲೆಗಳಿಂದ 290 ಗೈಡ್ಸ್, ಪ್ರವೀಣ್ ರೋವರ್ಸ್ 6 ಕಾಲೇಜ್‌ಗಳಿಂದ 33 ರೋವರ್ಸ್, ಪ್ರವೀಣ್ ರೇಂಜರ್ಸ್ 6 ಕಾಲೇಜುಗಳಿಂದ 53 ರೇಂಜರ್ಸ್ ಪ್ರಶಸ್ತಿ ಪತ್ರ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News