ಉ.ಪ್ರದೇಶ:ಯುವಕನಿಗೆ ಗುಂಡೇಟು:4 ಪೊಲೀಸರ ಅಮಾನತು
ಲಕ್ನೋ,ಫೆ.4: ಶನಿವಾರ ರಾತ್ರಿ ನೊಯ್ಡಾದ ಸೆಕ್ಟರ್-122ರಲ್ಲಿ ವ್ಯಕ್ತಿಯೋರ್ವನ ಮೇಲೆ ತರಬೇತಿಯಲ್ಲಿದ್ದ ಪೊಲೀಸ್ ಸಬ್ ಇನಸ್ಪೆಕ್ಟರ್ ಗುಂಡು ಹಾರಿಸಿದ್ದು, ಇದೊಂದು ನಕಲಿ ಎನ್‌ಕೌಂಟರ್ ಎಂದು ಗಾಯಾಳುವಿನ ಕುಟುಂಬವು ಆರೋಪಿಸಿದೆ. ಗಾಯಾಳು ಜಿತೇಂದ್ರ ಯಾದವ್ ನನ್ನು ನೊಯ್ಡಾದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಗುಂಡುಗಳನ್ನು ಹಾರಿಸಿದ್ದ ತರಬೇತಿ ಎಸ್‌ಐ ಬಳಿಯಿಂದ ರಿವಾಲ್ವರನ್ನು ವಶಪಡಿಸಿ ಕೊಂಡು, ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಇದು ಎನ್‌ಕೌಂಟರ್ ಘಟನೆಯಲ್ಲ ಎಂದು ಎಸ್‌ಎಸ್‌ಪಿ ಲವಕುಮಾರ್ ಸುದ್ದಿಸಂಸ್ಥೆಗೆ ತಿಳಿಸಿದರು.
ಮೇಲ್ನೋಟಕ್ಕೆ ಇದೊಂದು ವೈಯಕ್ತಿಕ ದ್ವೇಷದ ಪ್ರಕರಣವಾಗಿರುವಂತೆ ಕಂಡು ಬರುತ್ತಿದೆ. ಗಾಯಾಳುವಿನ ಅಣ್ಣ ತರಬೇತಿ ಎಸ್‌ಐಗೆ ಮೊದಲೇ ಗೊತ್ತಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಯಾದವ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು ಗುಂಡು ಹಾರಾಟಕ್ಕೆ ಕಾರಣವಾಗಿತ್ತು ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಪೊಲೀಸ್ ಎನ್‌ಕೌಂಟರ್‌ಗಳು ಹೆಚ್ಚುತ್ತಿರುವ ಸಂದರ್ಭ ದಲ್ಲಿಯೇ ಗಾಯಾಳುವಿನ ಕುಟುಂಬವು ನಕಲಿ ಎನ್‌ಕೌಂಟರ್‌ನ ಆರೋಪವನ್ನು ಮಾಡಿದೆ.