ಕೃಷಿ ಸಂಗಮ: ‘ಕೃಷಿ-ಯುವಜನತೆ: ಸವಾಲುಗಳು-ಸಾಧ್ಯತೆಗಳು’ ವಿಚಾರ ಮಂಥನ
ಮಂಗಳೂರು, ಫೆ. 4: ಅರುಣ್ಯ ಫೌಂಡೇಶನ್ ಆಯೋಜಿಸಿದ ಕೃಷಿ ಸಂಗಮದಲ್ಲಿ ರವಿವಾರ ‘ಕೃಷಿ ಮತ್ತು ಯುವಜನತೆ: ಸವಾಲುಗಳು-ಸಾಧ್ಯತೆಗಳು’ ವಿಚಾರ ಮಂಥನವು ಗಂಜಿಮಠದ ಒಡ್ಡೂರು ಫಾರ್ಮ್‌ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್, ಕೃಷಿ ಲಾಭದಾಯಕ, ಆದರೆ ಅದನ್ನು ಆಧುನಿಕ ನೆಲೆಗಟ್ಟಿನಲ್ಲಿ ಮಾಡಬೇಕು ಎಂದರು. ವಾರಣಾಶಿ ರಿಸರ್ಚ್ ಫೌಂಡೇಶನ್ ಮ್ಯಾನೆಜಿಂಗ್ ಟ್ರಸ್ಟಿ ಡಾ. ಕೃಷ್ಣ ಮೂರ್ತಿ ಮಾತನಾಡಿ, ಕೃಷಿ ಪೂರಕವಾಗಿ, ಪ್ರವಾಸೋದ್ಯಮ ಹಾಗೂ ಇನ್ನಿತರ ಆಯಾಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೌಲ್ಯವರ್ಧನೆ ಮಾಡಬಹುದು ಎಂದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಕುಮಾರ ಮಗದ ಕೃಷಿ ಉತ್ಪನ್ನಗಳಿಗೆ ವ್ಯವಸ್ಥಿತವಾದ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸುವ ಜಾಣ್ಮೆ ರೈತರಿಗೆ ಇರಬೇಕು ಎಂದರು. ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ, ಸಮುದಾಯ ಕೃಷಿಯ ಪರಿಕಲ್ಪನೆಯನ್ನು ಯುವಕರು ಸಾಕಾರಗೊಳಿಸಿದರೆ, ಆಹಾರ ಬೆಳೆಗಳಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.
ಕೃಷಿ ಸಂಗಮದ ಪ್ರಮುಖ ಆಕರ್ಷಣೆಯಾಗಿ ಮಂಗಳೂರಿನ ಕ್ವಾಡ್ ಪರ್ಸ್‌ಪೆಕ್ಟಿವ್ ತಂಡ ಅಭಿವೃದ್ಧಿಪಡಿಸಿರುವ ಕೃಷಿ ಬೆಳೆಗಳ ಸರ್ವೇಕ್ಷಣೆ ಮಾಡುವ ಡ್ರೋನ್ ಯಂತ್ರದ ಮೊದಲ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಅದರಿಂದ ದೊರೆತ ಮಾಹಿತಿಯನ್ನು ಸಭಿಕರೊಂದಿಗೆ ಚರ್ಚಿಸಲಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುಜಾತಾ ಸಂಚಿಕೆ ಮಾಸಪತ್ರಿಕೆಯ ಸಂಪಾದಕ ರಾಧಾಕೃಷ್ಣ ಹೊಳ್ಳ, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕೃಷಿ ಮಾಡುವ ಸಾಧ್ಯತೆಗಳನ್ನು ಯೋಚಿಸುವ ನೆಲೆಗಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಆಶಿಕ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ್ ಕಾರಂತ ಇಸ್ರೆಲ್ ಮಾದರಿಯ ಕೃಷಿ ವಿಧಾನವನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜೆಸಿಐ ಮಂಗಳೂರಿನ ಅಧ್ಯಕ್ಷ ಜೆಸಿ ಶೈಲಜಾ ರಾವ್ ಬಹುಮಾನಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಅರುಣ್ಯ ಫೌಂಡೇಶನ್‌ನ ಮ್ಯಾನೆಜಿಂಗ್ ಟ್ರಸ್ಟಿ ವಿಕ್ರಮ್ ಕೆ., ಉಪಾಧ್ಯಕ್ಷ ಶಂಕರ್ ಭಾರಧ್ವಾಜ್, ಕಾರ್ಯದರ್ಶಿ ಶ್ರೀನಿವಾಸ ಪೆಜತ್ತಾಯ, ಕೋಶಾಧಿಕಾರಿ ಬೃಜೆಶ್ ಗೋಖಲೆ ಉಪಸ್ಥಿತರಿದ್ದರು.