×
Ad

ಮೋದಿಯದ್ದು ಕೇವಲ ಸಂಡೇ ಶೋ: ಸಚಿವ ಖಾದರ್

Update: 2018-02-04 22:35 IST

ಮಂಗಳೂರು, ಫೆ. 4: ನಿರೀಕ್ಷೆಯಂತೆ ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ ಒಂದು ತಾಸಿನ ಸುಳ್ಳಿನ ಕಂತೆ ಸುರಿಸಿ ಮರಳಿದ್ದಾರೆ. ಅವರ ಆಗಮನದಿಂದ ಕಾಂಗ್ರೆಸ್ ಆಡಳಿತಕ್ಕೆ ಬಲ ಬರುತ್ತದೆಯೇ ಹೊರತು ಯಾವುದೇ ಪರಿಣಾಮ ಬೀರುವುದಿಲ್ಲ. ಅವರ ನಯವಾದ ಸುಳ್ಳನ್ನು ಕರ್ನಾಟಕದ ಬುದ್ದಿವಂತ ಮತದಾರರು ನಂಬುವುದಿಲ್ಲ. ಮೋದಿಯವರು ಸುಳ್ಳು ಹೇಳಬಲ್ಲ ಶ್ರೇಷ್ಟ ಕಲಾವಿದರು. ಅವರದ್ದು ಬೆಂಗಳೂರಲ್ಲಿ ಕೇವಲ ಸಂಡೇ ಶೋ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಮೋದಿಗೆ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕೆ ಮಾಡಲು ಬಹುಪಾಲು ಸಮಯ ಉಪಯೋಗಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರದ ಜನೋಪಯೋಗಿ ಕೆಲಸಗಳು ಮೋದಿಗೆ ಹಾಗೂ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದು ಅವರ ಇಂದಿನ ಭಾಷಣವೇ ಸಾಕ್ಷಿ ಎಂದು ಯು.ಟಿ.ಖಾದರ್ ಪ್ರದಾನಿಗೆ ತಿರುಗೇಟು ನೀಡಿದ್ದಾರೆ.

ಕಳಸಾ-ಬಂಡೂರಿ, ಮಹದಾಯಿ ಯೋಜನೆಯ ಸಮಸ್ಯೆಯನ್ನು ಕೇಂದ್ರ ಬಗೆಹರಿಸಬೇಕಿತ್ತು. ರಾಜ್ಯ ರೈತರ ಬಗ್ಗೆ ಚಿಂತಿಸಬೇಕಿತ್ತು. ಅದು ಬಿಟ್ಟು ದ್ವೇಷ ರಾಜಕೀಯ ಭಾಷಣ ಮಾಡಿ ಮೋದಿ ತೆರಳಿದ್ದಾರೆ ಎಂದರು. 

ಕರ್ನಾಟಕದಲ್ಲಿ ಕೊಲೆ ರಾಜಕೀಯ ನಡೆಯುತ್ತಿದೆ ಎನ್ನುವ ಮೋದಿ ತಾನು ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ಸಾವಿರಾರು ನರಮೇಧಗಳ ಬಗ್ಗೆ ಏನನ್ನುತ್ತಾರೆ ಎಂದು ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

2018ರ ಕರ್ನಾಟಕ ಚುನಾವಣೆ ಹಾಗೂ 2019ರ ಕೇಂದ್ರ ಚುನಾವಣೆ ಬಿಜೆಪಿಯ ಮೋದಿ ಪರಿವಾರಕ್ಕೆ ಉತ್ತರ ನೀಡಲಿದೆ. ಅದರ ಮುನ್ಸೂಚನೆಯಾಗಿ ಇತ್ತೀಚೆಗೆ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಪ್ರಜ್ಞಾವಂತ ಮತದಾರರ ಗೆಲುವು ಎಂದು ಬಿಜೆಪಿ ತಿಳಿಯಬೇಕು. ಭ್ರಷ್ಟಾಚಾರ ಮಾಡಿ ಸಾಲು ಸಾಲಾಗಿ ಜೈಲಿಗೆ ಹೋದ ಬಿಜೆಪಿ ನಾಯಕತ್ವಕ್ಕೆ ಜನರು ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಯು.ಟಿ.ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News