×
Ad

ಸಮಾಜದ ಸ್ವಾಸ್ಥ್ಯ ಕಾಪಾಡುವುದೇ ಅಬ್ಬಕ್ಕಳಿಗೆ ಸಲ್ಲಿಸುವ ಕೊಡುಗೆ: ಸಚಿವೆ ಉಮಾಶ್ರೀ

Update: 2018-02-04 22:49 IST

ಮಂಗಳೂರು(ಅಬ್ಬಕ್ಕ ಉತ್ಸವ ವೇದಿಕೆ ಕೊಲ್ಯ), ಫೆ. 4: ಎಲ್ಲಾ ಧರ್ಮದವರನ್ನು ಸಮಾನ ಪ್ರೀತಿ, ಗೌರವದಿಂದ ಕಂಡ ರಾಣಿ ಅಬ್ಬಕ್ಕ ದೇವಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಮೂಲಕ ಗೌರವದ ಕೊಡುಗೆ ನೀಡಬೇಕಾಗಿದೆ ಎಂದು ರಾಜ್ಯದ ಕನ್ನಡ ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಹಿರಿಯ ನಾಗರಿಕರ ಸಬಲೀಕರಣ ಖಾತೆಯ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಕೊಲ್ಯದಲ್ಲಿ ಹಮ್ಮಿಕೊಂಡ ಎರಡು ದಿನಗಳ 'ಅಬ್ಬಕ್ಕ ಉತ್ಸವ 2017-18'ರ ಸಮಾರೋಪ ಸಮಾರಂಭದಲ್ಲಿ ಡಾ. ಸಾರಾ ಅಬೂಬಕರ್‌ ಮತ್ತು ನಟಿ ವಿನಯ ಪ್ರಸಾದ್‌ರಿಗೆ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತಿದ್ದರು.

ರಾಣಿ ಅಬ್ಬಕ್ಕ ಈ ನಾಡಿನ ಹೆಮ್ಮೆಯ ಸಂಕೇತ:- ಕಿತ್ತೂರು ಚೆನ್ನಮ್ಮ , ಬೆಳವಡಿ ಮಲ್ಲಮ್ಮನಂತೆ ಅವರಿಗಿಂತಲೂ ಹಿಂದೆ ಧರ್ಮಾತೀತವಾಗಿ ಒಂದು ನಾಡಿನ ರಾಣಿಯಾಗಿ ಆಡಳಿತ ನಡೆಸಿ, ವಿದೇಶಿಯರ ವಿರುದ್ಧ ಹೋರಾಟ ನಡೆಸಿದ ಅಬ್ಬಕ್ಕ ದೇವಿಯಂತಹ ರಾಣಿಯಿದ್ದಳು ಎನ್ನುವುದು ನಮಗೆಲ್ಲ ಹೆಮ್ಮೆಯ ವಿಚಾರ. ಆಕೆ ಯಾವ ರೀತಿ ಎಲ್ಲರನ್ನು ಸೇರಿಸಿಕೊಂಡು ಆಡಳಿತ ನಡೆಸಿದ ರೀತಿಯ ವಾತಾವರಣವನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದು ಉಮಾಶ್ರೀ ತಿಳಿಸಿದರು.

ಅಬ್ಬಕ್ಕ ಪ್ರಶಸ್ತಿಗೆ ಪಾತ್ರರಾಗಿರುವ ಸಾರಾ ಅಬೂಬಕರ್ ಮಾನವೀಯತೆಯನ್ನು ಬಿಟ್ಟುಕೊಡದ, ಕಾಳಜಿ ಹೊಂದಿರುವ ಈ ನಾಡಿನ ಅಭಿಮಾನದ ಲೇಖಕಿ, ನಟಿ ವಿನಯ ಪ್ರಸಾದ್ ಯುವ ಕಲಾವಿದರಿಗೆ ಮಾದರಿಯಾಗುವ ರಂಗಭೂಮಿಯಿಂದ ಬಂದ ನಟಿ ಎಂದು ಉಮಾಶ್ರೀ ಹೇಳಿದರು.

ರಾಣಿ ಅಬ್ಬಕ್ಕ ನಾಡಿನ ಮಹಿಳೆಯರ ಆತ್ಮ ವಿಶ್ವಾಸದ ಪ್ರತೀಕ:- ರಾಣಿ ಅಬ್ಬಕ್ಕ ನಾಡಿನ ಮಹಿಳೆಯರ ಆತ್ಮ ವಿಶ್ವಾಸದ ಪ್ರತೀಕವಾಗಿದ್ದವರು ಆಕೆಯ ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಎಂಟು ಕೋಟಿ ರೂ.ಗಳ ಅಬ್ಬಕ್ಕ ಭವನ ನಿರ್ಮಾಣವಾಗಲಿದೆ. ಸರಕಾರ ಅನುಮೋದನೆ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಅಬ್ಬಕ್ಕ ಹೆಸರು ಇಡುವುದು ಸೂಕ್ತ, ಸಚಿವರು ಈ ಬಗ್ಗೆ ಗಮನಹರಿಸಬೇಕು ಎಂದು ವಿಶ್ರಾಂತ ಲೊಕಾಯುಕ್ತ ಸಂತೋಷ್ ಹೆಗ್ಡೆ ಸಮಾರಂಭದಲ್ಲಿ ಭಾಗವಹಿಸಿ, ಸಲಹೆ ನೀಡಿದರು.

ತುಳು ನಾಡಿನ ರಾಣಿಯಾಗಿ ಅಂತರ್‌ಜಾತಿ ಮದುವೆಯನ್ನು ಮಾಡಿಸಿದ ರಾಣಿ, ಕೊಲ್ಲಿ ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟು ನಡೆಸಲು ಕಾರಣ ಳಾದಾಕೆ, ಮುಸಲ್ಮಾನರು ಕೊಲೆಗಡುಕರು, ಕರ್ನಾಟಕದವರು ಹರಾಮಿಗಳು, ಸಂವಿಧಾನವನ್ನೇ ಬದಲಾಯಿಸಲು ಬಂದವರು ಎನ್ನುವ ರಾಜಕಾರಣಿಗಳು ಇರುವ ನಾಡಿನಲ್ಲಿ 500 ವರ್ಷಗಳ ಹಿಂದೆ ತನ್ನ ಸೇನೆಯಲ್ಲಿ ಮೊಗವೀರ, ಮಾಪಿಳ್ಳ, ಬ್ಯಾರಿ ಸಮುದಾಯದವರನ್ನು ಅಧಿಕಾರಿಗಳಾಗಿ ನೇಮಿಸಿ ಪೋರ್ಚುಗೀಸರ ವಿರುದ್ಧ ಹೋರಾಡಿ ನಾಡನ್ನು ರಕ್ಷಿಸಿ ಹೊಸ ಚರಿತ್ರೆ ಬರೆದ ರಾಣಿಯ ಮಾನವೀಯ ಮೌಲ್ಯಗಳು ನಮಗೆ ಆದರ್ಶವಾಗಬೇಕಾಗಿದೆ. ಟಿಪ್ಪುವಿನಂತೆ ಕರ್ನಾಟಕದಲ್ಲಿ ವಿದೇಶಿಯರ ನಿದ್ದೆಗೆಡಿಸಿದ ರಾಣಿ ಅಬ್ಬಕ್ಕನ ಸಾಹಸ ಈಗ ಪವಾಡದಂತೆ ಕಾಣುತ್ತದೆ ಎಂದು ಸಾರಾ ಅಬೂಬಕರ್ ತಿಳಿಸಿದರು.

ನಟಿ ವಿನಯ ಪ್ರಸಾದ್ ಮಾತನಾಡಿ, ಅಬ್ಬಕ್ಕ ಪ್ರಶಸ್ತಿ ತನಗೆ ಮಹತ್ವದ್ದು, ಆಕೆ ನಮಗೆಲ್ಲಾ ಸ್ಪೂರ್ತಿ ಎಂದರು. ಡಾ. ಸುಮಿತ್ರಾ ಬಾಯಿ, ಮನಪಾ ಮೇಯರ್ ಕವಿತಾ ಸನಿಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರು ಮುಹಮ್ಮದ್, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಉಳ್ಳಾಲ ನಗರ ಸಭೆಯ ಅಧ್ಯಕ್ಷ ಕುಂಞಿ ಮೋನು, ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ವಿಶೇಷ ಆಹ್ವಾನಿತರಾದ ಸದಾಶಿವ ಉಳ್ಳಾಲ್, ಕೋಡಿಜಾಲ್ ಇಬ್ರಾಹೀಂ, ಡಾ. ಶಿವ ಕುಮಾರ್ ಮಗಧ, ಗಂಗಾಧರ ಉಳ್ಳಾಲ್, ಹೈದರ್ ಪರ್ತಿಪ್ಪಾಡಿ, ದೀಪಕ್ ಪಿಲಾರ್, ಸುಹಾಸಿನಿ ಬಬ್ಬುಕಟ್ಟೆ, ಆನಂದ ಅಸೈಗೋಳಿ, ರಝೀಯಾ ಇಬ್ರಾಹಿಂ, ಅಬ್ದುಲ್ ಅಝೀಝ್ ಹಕ್, ಪುಷ್ಕಳ ಕುಮಾರ್, ರೇವಣ್ಕರ್, ತಾರಾನಾಥ್ ಮೊದಲಾದವರು ಉಪಸ್ಥಿತರಿದ್ದರು.

ಭಾಸ್ಕರ ರೈ ಕುಕ್ಕುವಳ್ಳಿ, ಉತ್ಸವ ಸಮಿತಿಯ ಉಸ್ತುವಾರಿ ದಿನಕರ ಉಳ್ಳಾಲ ಸ್ವಾಗತಿಸಿದರು. ಕಲಾವಿದ ಉಳ್ಳಾಲ ಮೋಹನ್ ಕುಮಾರ್, ಶಿಲ್ಪಿ ಉಮೇಶ್ ಬೋಳಾರ ರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News