ಅಮೆರಿಕ ಶೀತಲ ಸಮರದ ಮನಸ್ಥಿತಿ ಕೈಬಿಡಲಿ: ಚೀನಾ
ಬೀಜಿಂಗ್,ಫೆ.4: ಅಮೆರಿಕವು ಅದರ ಶೀತಲ ಸಮರದ ಮನಸ್ಥಿತಿ ಯನ್ನು ಕೈಬಿಡಬೇಕೆಂದು ಹಾಗೂ ತನ್ನ ಸೇನಾ ನಿಯೋಜನೆಯ ಬಗ್ಗೆ ತಪ್ಪುಗ್ರಹಿಕೆ ಹೊಂದಬಾರದೆಂದು ಚೀನಾ ಆಗ್ರಹಿಸಿದೆ. ಇತರ ರಾಷ್ಟ್ರಗಳನ್ನು ಹಿಮ್ಮೆಟ್ಟಿಸಲು ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸುವ ತನ್ನ ಯೋಜನೆಯನ್ನು ಅಮೆರಿಕ ಪ್ರಕಟಿಸಿದ ಬೆನ್ನಲ್ಲೇ ಚೀನಾ ಈ ಪ್ರತಿಕ್ರಿಯೆ ನೀಡಿದೆ.
‘‘ಶಾಂತಿ ಹಾಗೂ ಅಭಿವೃದ್ಧಿ, ಮಾರ್ಪಡಿಸಲಾಗದಂತಹ ಜಾಗತಿಕ ಪ್ರವೃತ್ತಿಯಾಗಿದೆ. ಜಗತ್ತಿನಲ್ಲೇ ಅತಿ ದೊಡ್ಡ ಅಣ್ವಸ್ತ್ರ ಸಂಗ್ರಹವನ್ನು ಹೊಂದಿರುವ ರಾಷ್ಟ್ರವಾದ ಅಮೆರಿಕವು ಈ ಪ್ರವೃತ್ತಿಯನ್ನು ಅನುಸರಿಸುವ ಉಪಕ್ರಮವನ್ನು ಕೈಗೊಳ್ಳಬೇಕೇ ಹೊರತು ಅದರ ವಿರುದ್ಧ ಸಾಗಕೂಡದು’’ ಎಂದು ಚೀನಾದ ರಕ್ಷಣಾ ಸಚಿವಾಲಯವು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಚೀನಾದ ಉದ್ದೇಶಗಳ ಬಗ್ಗೆ ಅಮೆರಿಕವು ಪೂರ್ವಗ್ರಹಪೀಡಿತ ಸಂದೇಹಗಳನ್ನು ಹೊಂದಿದೆಯೆಂದು ಬೀಜಿಂಗ್‌ನ ರಕ್ಷಣಾ ಸಚಿವಾಲಯವು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಅಣ್ವಸ್ತ್ರಗಳ ಅಭಿವೃದ್ಧಿಯ ಬಗ್ಗೆ ಚೀನಾವು ಸದಾ ಸಂಯಮದ ನಿಲುವನ್ನು ಹೊಂದಿದೆ ಹಾಗೂ ತನ್ನ ಅಣ್ವಸ್ತ್ರ ಶಕ್ತಿಯನ್ನು ಅತ್ಯಂತ ಕನಿಷ್ಠ ಪ್ರಮಾಣದಲ್ಲಿರಿಸಿದೆಯೆಂದು ಅದು ಹೇಳಿದೆ.