×
Ad

ಮಂಗಳೂರು: ಎಸೆಸೆಲ್ಸಿಯಿಂದ ಪಿಜಿ ಉತ್ತೀರ್ಣ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ

Update: 2018-02-05 19:31 IST

ಮಂಗಳೂರು, ಫೆ.5: ದಕ್ಷಿಣ ಕನ್ನಡ ಜಿಲ್ಲಾಡಳಿತವು ಉದ್ಯಮ ಶೀಲತೆ ಅವಕಾಶ ಮತ್ತು ಕಲಿಕಾ ಕೇಂದ್ರ (ಸಿಇಒಎಲ್) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಫೆ. 17ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದಿಶಾ ಉದ್ಯೋಗ ಪರ್ವವನ್ನು ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಈ ಉದ್ಯೋಗದಲ್ಲಿ ಎಸೆಸೆಲ್ಸಿಯಿಂದ ಪಿಜಿ ಉತ್ತೀರ್ಣರಾದ ಅಭ್ಯರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಅರ್ಹರಿಗೆ ಉದ್ಯೋಗ ದೊರೆಯಬೇಕು ಎಂಬ ಉದ್ದೇಶದಿಂದ ಈ ಬಾರಿ ಈ ಉದ್ಯೋಗ ಪರ್ವದಲ್ಲಿ ಅಂತಿಮ ಪದವಿ ಯಲ್ಲಿರುವವರು ಅಥವಾ ಇಂಜನಿಯರಿಂಗ್ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿಲ್ಲ. ಸುಮಾರು 150 ಕಂಪನಿಗಳು ಈ ಉದ್ಯೋಗ ಪರ್ವದಲ್ಲಿ ಭಾಗವಹಿಸಲಿದ್ದು, ಈಗಾಗಲೇ 66 ಕಂಪನಿಗಳು ಹೆಸರು ನೋಂದಾಯಿಸಿಕೊಂಡಿವೆ ಎಂದು ಅವರು ಹೇಳಿದರು.

ಈಗಾಗಲೇ ನೋಂದಾಯಿಸಿಕೊಂಡಿರುವ ಕಂಪನಿಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿದವರಿಗೆ 1842, ಐಟಿಐ ಡಿಪ್ಲೊಮಾ ಹೊಂದಿದವರಿಗೆ 1164, ಪದವಿಯಾದವರಿಗೆ 2223 ಹಾಗೂ ಸ್ನಾತಕೋತ್ತರ ಪದವೀಧರರಿಗೆ 937 ಉದ್ಯೋಗಗಳು ಲಭ್ಯವಿವೆ. ಇದರಲ್ಲಿ 26 ಮಂಗಳೂರು ಮೂಲದ ಕಂಪನಿಗಳಾಗಿದ್ದು, 24 ಹೊರ ಜಿಲ್ಲೆಗಳು ಹಾಗೂ 6 ಹೊರ ರಾಜ್ಯಗಳ ಕಂಪನಿಗಳಾಗಿವೆ ಎಂದು ಅವರು ವಿವರ ನೀಡಿದರು.

ಅಭ್ಯರ್ಥಿಗಳಿಗೆ ಉದ್ಯೋಗ ಪರ್ವದ ಬಗ್ಗೆ ಮಾಹಿತಿ ನೀಡಲು ಓರಿಯೆಂಟೇಶನ ಕಾರ್ಯಕ್ರಮ ಫೆ. 10ರಂದು ಕದ್ರಿ ಪಾಲಿಟೆಕ್ನಿಕ್‌ನಲ್ಲಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ಉದ್ಯೋಗ ಪರ್ವದ ಉಸ್ತುವಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವೇಕ್ ಆಳ್ವ ತಿಳಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಉದ್ಯೋಗ ಪರ್ವದ ಲೋಗೋ ಬಿಡುಗಡೆಗೊಳಿಸಿದರು. ಅಪರ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಸಿಇಒಎಲ್ ಅಧಿಕಾರಿ ಪ್ರದೀಪ್, ಡಾ. ಇಫ್ತಿಕಾರ್ ಅಲಿ ಮೊದಲಾದವರು ಉಪಸ್ಥಿತರಿದ್ದರು.

ಅಭ್ಯರ್ಥಿಗಳು ಏನೆಲ್ಲಾ ದಾಖಲೆ ತರಬೇಕು?

ಉದ್ಯೋಗ ಪರ್ವದ ದಿನದಂದು ಅಭ್ಯರ್ಥಿಗಳು ಬೆಳಗ್ಗೆ 8 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಹಾಜರಿರತಕ್ಕದ್ದು. ಮಾತ್ರವಲ್ಲದೆ ತಮ್ಮ ಜತೆ 10 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಇತ್ತೀಚಿನ ಸ್ವವಿವರ ಮಾಹಿತಿ/ಬಯೋಡಾಟಾ/ರೆಸ್ಯೂಮ್, ಎಲ್ಲಾ ಅಂಕ ಪಟ್ಟಿ (ಜೆರಾಕ್ಸ್ ಪ್ರತಿ)

ಹೇಗೆ ನೋಂದಣಿ? 

ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿದವರು ಮತ್ತು ಪದವಿ, ಸ್ನಾತಕೋತ್ತರ ಮತ್ತು ಇತರ ವಿದ್ಯಾರ್ಹತೆ ಹೊಂದಿದವರು ಈ ಲಿಂಕ್ ಉಪಯೋಗಿಸಿ ನೋಂದಣಿ ಮಾಡಿಕೊಳ್ಳಬಹುದು. ಮಾತ್ರವಲ್ಲದೆ ಅಭ್ಯರ್ಥಿಗಳು www.mangaluruudyaogamela.com, ವೆಬ್‌ಸೈಟನ್ನು ನಿಯಮಿತವಾಗಿ ಭೇಟಿ ನೀಡುವ ಮೂಲಕ ಕಂಪನಿಗಳ ವಿವರ, ಹುದ್ದೆಗಳು ಮತ್ತು ಇತರ ಮಾಹಿತಿಯನ್ನು ಪಡೆಯಬಹುದು.

ಸಿಇಒಎಲ್‌ನಿಂದ ಸಿಗಲಿದೆ ಮಾಹಿತಿ- ತರಬೇತಿ

ಈ ಉದ್ಯೋಗ ಪರ್ವವು ಜಿಲ್ಲೆಯ ನಿರುದ್ಯೋಗಿ ಯುವಕರ ಅಂಕಿ ಅಂಶಗಳನ್ನು ಸಂಗ್ರಹಿಸುವಲ್ಲಿಯೂ ಜಿಲ್ಲಾಡಳಿತಕ್ಕೆ ನೆರವು ನೀಡಲಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳ ಜತೆ ನಿರಂತರ ಸಂಪರ್ಕವಿರಿಸಿಕೊಂಡು ಅವರಿಗೆ ಉದ್ಯಮ ಶೀಲತೆ ಅವಕಾಶ ಮತ್ತು ಕಲಿಕಾ ಕೇಂದ್ರ (ಸಿಇಒಎಲ್)ನ ಇಂಕ್ಯುಬೇಶನ್ ಕೇಂದ್ರದ ಮೂಲಕ ನಿರಂತರ ಮಾಹಿತಿಯನ್ನು ಒದಗಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಅಗತ್ಯವಿದ್ದಲ್ಲಿ ಕಂಪನಿಗಳು ಬಯಸುವ ತಾಂತ್ರಿಕ ಹಾಗೂ ಕೌಶಲ್ಯಾಭಿವೃದ್ದಿ ತರಬೇತಯನ್ನು ಸಿಇಒಎಲ್ ಮೂಲಕ ಒದಗಿಸಲಾಗುವುದು. ಅಭ್ಯರ್ಥಿಗಳಿಗೆ ಕಾಲ ಕಾಲಕ್ಕೆ ಕಂಪನಿಗಳಲ್ಲಿ ಲಭ್ಯ ವಿರುವ ಉದ್ಯೋಗಾವಕಾಶಗಳನ್ನು ಅವರ ಮೊಬೈಲ್ ಸಂಖ್ಯೆಗೆ ಸಂದೇಶದ ಮೂಲಕ ರವಾನಿಸುವ ಕಾರ್ಯವೂ ನಡೆಯಲಿದೆ. ಒಟ್ಟಿನಲ್ಲಿ ಸಿಇಒಎಲ್ ಯುವ ಜನರ ಪಾಲಿಗೆ ಉತ್ತಮ ಅರ್ಹ ಉದ್ಯೋಗಾವಕಾಶ ಕಲ್ಪಿಸುವ ಉತ್ತಮ ಭವಿಷ್ಯ ರೂಪಿಸುವ ಕೇಂದ್ರವಾಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ರಾಯಚೂರಿನಲ್ಲಿ ತಾನು ಈಗಾಗಲೇ ಈ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಿಇಒಎಲ್ ಮೂಲಕ ಈ ಕ್ರಮ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News