ಶ್ರೀಶಾಂತ್‌ಗೆ ಆಜೀವ ನಿಷೇಧ: ಬಿಸಿಸಿಐಗೆ ಸುಪ್ರೀಂಕೋರ್ಟ್ ನೋಟಿಸ್
ಹೊಸದಿಲ್ಲಿ, ಫೆ.5: ಭಾರತದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್‌ಗೆ ವಿಧಿಸಿರುವ ಆಜೀವ ನಿಷೇಧಕ್ಕೆ ಸಂಬಂಧಿಸಿ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಸೋಮವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ನೊಟೀಸ್ ಜಾರಿ ಮಾಡಿದೆ.
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ಕೇರಳದ ಕ್ರಿಕೆಟಿಗ ಶ್ರೀಶಾಂತ್‌ಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆಜೀವ ನಿಷೇಧ ವಿರುದ್ಧ ಶ್ರೀಶಾಂತ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಶ್ರೀಶಾಂತ್ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಇನ್ನು ನಾಲ್ಕು ವಾರದಲ್ಲಿ ಉತ್ತರ ನೀಡುವಂತೆ ಆದೇಶಿಸಿದೆ.
ಬಿಸಿಸಿಐ ಆಯೋಜಿಸುವ ಎಲ್ಲ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿಯುವಂತೆ ವೇಗದ ಬೌಲರ್ ಶ್ರೀಶಾಂತ್‌ಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇರಳ ಹೈಕೋರ್ಟ್ ತಾಕೀತು ಮಾಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಳೆದ ವಾರ ಶ್ರೀಶಾಂತ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
2013ರಲ್ಲಿ ಬೆಳಕಿಗೆ ಬಂದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಶ್ರೀಶಾಂತ್‌ಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆಗ ಶ್ರೀಶಾಂತ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದರು.