×
Ad

ಮೂವರು ಕೊಂಕಣಿ ಸಾಧಕರಿಗೆ ಎಫ್‌ಕೆಸಿಎ ಪ್ರಶಸ್ತಿ ಪ್ರದಾನ

Update: 2018-02-05 20:19 IST

ಬೆಂಗಳೂರು, ಫೆ.5: ಫೆಡರೇಶನ್ ಆಫ್ ಕೊಂಕಣಿ ಕ್ಯಾಥೊಲಿಕ್ ಅಸೋಸಿಯೇಷನ್‌ನ 21ನೇ ಫೆಡರೇಶನ್ ದಿನಾಚರಣೆ ರವಿವಾರ ಸಂಜೆ ಬೆಂಗಳೂರು ರಿಚ್ಮಂಡ್ ಟೌನ್‌ನ ಗುಡ್ ಶೆಫರ್ಡ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೊಂಕಣಿ ಕೆಥೋಲಿಕ್ ಸಮಾಜದ ಮೂವರ ಶ್ರೇಷ್ಠ ಸಾಧಕರಿಗೆ ಎಫ್‌ಕೆಸಿಎ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅ.ವಂ.ಡಾ.ಬೆರ್ನಾರ್ಡ್ ಮೊರಾಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನಸಭೆಯ ಮುಖ್ಯ ಸಚೇತಕ ಐವಾನ್ ಡಿಸೋಜ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆರ್. ಸಂಪತ್‌ರಾಜ್ ಅವರು ಉಪಸ್ಥಿತರಿದ್ದರು. 

ಸಮಾರಂಭದಲ್ಲಿ ಕೊಂಕಣಿಯನ್ನು ತನ್ನ ಬರವಣಿಗೆಯ ಮೂಲಕ ಜನಪ್ರಿಯಗೊಳಿಸಿರುವುದಕ್ಕಾಗಿ ಲೇಖಕ ಪೌಲ್ ಮೊರಾಸ್ ಅವರಿಗೆ ‘ಜೀವಮಾನ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಿದರೆ, ಮಂಗಳೂರಿನ ಸ್ವಯಂಸೇವಾ ಸಂಸ್ಥೆ ‘ವೈಟ್ ಡೌವ್’ ಸ್ಥಾಪಕ ಕೊರಿನ್ ಅಂಟೋನೆಟ್ ರಾಸ್ಕಿನ್ಹಾ ಅವರಿಗೆ ‘ವೃತ್ತಿಪರ ಶ್ರೇಷ್ಠ ಸಾಧಕ ಪ್ರಶಸ್ತಿ’ ನೀಡಲಾಯಿತು. ಅದೇ ರೀತಿ ಪುಣೆ ರೋಸರಿ ಎಜುಕೇಶನ್ ಗ್ರೂಪ್‌ನ ಅಧ್ಯಕ್ಷ ವಿವೇಕ್ ಅರಾನ್ಹ ಅವರಿಗೆ ‘ವರ್ಷದ ಶ್ರೇಷ್ಠ ವಾಣಿಜ್ಯೋದ್ಯಮಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಸಮಾಜದ ಹೆಚ್ಚು ಹೆಚ್ಚು ಮಂದಿ ಯುವಜನತೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿ ಸಲು ಮುಂದೆ ಬರಬೇಕು ಎಂದರಲ್ಲದೇ, ಬಿಬಿಎಂಪಿ ಬೆಂಗಳೂರು ರಸ್ತೆ ಗಳನ್ನು ಹೊಂಡಮುಕ್ತಗೊಳಿಸಲು ಹೆಚ್ಚು ಶ್ರಮ ವಹಿಸಬೇಕು ಎಂದರು.

ಶಾಸಕ ಜೆ.ಆರ್.ಲೋಬೊ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿರುವ ಕೊಂಕಣಿ ಸಮುದಾಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಅಧಿಕಾರಶಾಹಿಗಳನ್ನು ಸಮಾಜಕ್ಕೆ ನೀಡುವಲ್ಲಿ ತುಂಬಾ ಹಿಂದೆ ಬಿದ್ದಿದೆ ಎಂದರು.

ಅತಿಥಿಗಳನ್ನು ಸ್ವಾಗತಿಸಿದ ಎಫ್‌ಕೆಸಿಎ ಅಧ್ಯಕ್ಷ ಡಾ.ಎಡ್ವರ್ಡ್ ಆನಂದ್ ಡಿಸೋಜ ಪ್ರಾಸ್ತಾವಿಕ ಮಾತುಗಳಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಕುವೈಟ್, ದುಬಾಯಿ, ಅಬುದಾಬಿ, ಓಮನ್, ಕೆನಡಾ, ಅಮೆರಿಕ ಹಾಗೂ ಬ್ರಿಟನ್‌ಗಳ ಒಟ್ಟು 32 ಕೊಂಕಣಿ ಕೆಥೋಲಿಕ್ ಸಂಸ್ಥೆಗಳು ಎಫ್‌ಕೆಸಿಎ ಅಡಿಯಲ್ಲಿವೆ ಎಂದರು.

ಪ್ರಧಾನ ಕಾರ್ಯದರ್ಶಿ ಸುನಿಲ್ ಕುಂಟಿನ್ಹೊ ಎಫ್‌ಕೆಸಿಎ ವಾರ್ಷಿಕ ವರದಿ ಮಂಡಿಸಿದರೆ, ಕ್ಲೆಮೆನ್ಸ್ ಡಿಸಿಲ್ವ ವಂದಿಸಿದರು. ರಾಯ್‌ಸ್ಟನ್ ಪಿಂಟೊ ಮತ್ತು ಡಾ.ಸೀಮಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News