×
Ad

ಉಡುಪಿ: ಫೆ.16ರಿಂದ ರಾಘವೇಂದ್ರ ಸಪ್ತಾಹ ರಜತೋತ್ಸವ

Update: 2018-02-05 21:11 IST

ಉಡುಪಿ, ಫೆ. 5: 1994ರಿಂದ ಆಚರಿಸಿಕೊಂಡು ಬರಲಾಗುತ್ತಿರುವ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ 25ನೇ ವರ್ಷದ 'ಶ್ರೀರಾಘವೇಂದ್ರ ಸಪ್ತಾಹ ಮಹೋತ್ಸವ'ದ ರಜತೋತ್ಸವ ಸಮಾರಂಭ, ಫೆ.16ರಿಂದ 22ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಲಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಮೀಜಿ, ಫೆ.16ರ ಶುಕ್ರವಾರ ಸಂಜೆ 4:30ಕ್ಕೆ ಮಂತ್ರಾಲಯ ಶ್ರೀರಾಘವೇಂದ್ರ ಮಠದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ . ಬಳಿಕ ಒಂದು ವಾರ ಕಾಲ ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಆದ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ಉಪನ್ಯಾಸ, ಪ್ರವಚನ ಕಾರ್ಯಕ್ರಮ ನಡೆಯಲಿವೆ ಎಂದರು.

ಫೆ.17ರಂದು ಸಂಜೆ 8 ಗಂಟೆಗೆ ಶ್ರೀರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ. ಮರುದಿನ ಫೆ.18ರಂದು ಸಂಜೆ ಗುರುರಾಯರ ಶೋಭಾ ಯಾತ್ರೆ ಜೋಡುಕಟ್ಟೆಯಿಂದ ರಥಬೀದಿಯವರೆಗೆ ನಡೆಯಲಿದೆ. ಫೆ.21ರಂದು  ಸಂಜೆ 7:30 ರಿಂದ ರಾಜಾಂಗಣದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ನಡೆಯಲಿದೆ. ಕೊನೆಯ ದಿನವಾದ 22ರಂದು ಶ್ರೀರಾಘವೇಂದ್ರ ಜಯಂತಿಯನ್ನು ಆಚರಿಸಲಾಗುವುದು ಎಂದು ಪರ್ಯಾಯ ಶ್ರೀಗಳು ಹೇಳಿದರು.

ಇದೇ ಸಂದರ್ಭದಲ್ಲಿ ಪರ್ಯಾಯ ಪಲಿಮಾರು ಶ್ರೀಗಳು ಶ್ರೀರಾಘವೇಂದ್ರ ಸಪ್ತಾಹ ರಜತೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕನಕ ಮಂಟಪದಲ್ಲಿ ಬಿಡುಗಡೆಗೊಳಿಸಿದರು. ಈ ವೇಳೆ ಪಲಿಮಾರು ಮಠದ ದಿವಾನರಾದ ಶಿಬರೂರು ವೇದವ್ಯಾಸ ತಂತ್ರಿ, ಮಂತ್ರಾಲಯ ಮಠದ ಅರ್ಚಕ ಪರಿಮಳಾಚಾರ್ಯ, ಪ್ರಹ್ಲಾದ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News