ಉಡುಪಿ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ
ಉಡುಪಿ, ಫೆ.5: ಜಿಲ್ಲೆಯಲ್ಲಿ ಫೆ.12ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತಿದ್ದು, ಒಟ್ಟು 2,54,832 ಮಂದಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಮಕ್ಕಳು ಪೌಷ್ಠಿಕಾಂಶದಿಂದ ಕೂಡಿದ ಆಹಾರವನ್ನು ಸೇವಿಸಿದರೂ ಸಹ ಜಂತುಹುಳುಗಳ ಬಾಧೆಯಿಂದ, ಮಕ್ಕಳಲ್ಲಿ ಅಪೌಷ್ಠಿಕತೆ ಹಾಗೂ ರಕ್ತಹೀನತೆ ಉಂಟಾಗಿ ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವುದರಿಂದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.ಆದ್ದರಿಂದ ಜಿಲ್ಲೆಯರುವ ಒಂದರಿಂದ 19 ವರ್ಷದೊಳಗಿನ ಎಲ್ಲರಿಗೂ ಜಂತುಹುಳು ನಾಶಪಡಿಸುವ ಆಲ್ಬೆಂಡರೆಲ್ ಮಾತ್ರೆಗಳನ್ನು ವಿತರಿಸಲಾಗುವುದು ಎಂದು ಸಿಇಒ ತಿಳಿಸಿದರು.
ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ಮಾತ್ರೆ ವಿತರಿಸುವಂತೆ ಹಾಗೂ ಸುರಕ್ಷಿತ ಕೈ ತೊಳೆಯುವ ವಿಧಾನಗಳ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚಿಸಿದರು. ಶಾಲೆಯಿಂದ ಹೊರಗುಳಿದ ಮಕ್ಕಳು ಜಂತುಹುಳು ಮಾತ್ರೆಯಿಂದ ವಂಚಿತ ರಾಗದಂತೆ ತಡೆಯಲು ಆಶಾ ಕಾರ್ಯಕರ್ತೆಯರ ಮೂಲಕ ಜಿಲ್ಲೆಯ ಪ್ರತಿ ಮನೆಮನೆಗೆ ಮಾತ್ರೆಗಳನ್ನು ತಲುಪಿಸುವಂತೆ ಹಾಗೂ ಈ ಕುರಿತು ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಿಇಓ ತಿಳಿಸಿದರು.
ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಸ್ತುತ ರಜೆ ಇರುವ ಕಾರಣ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಫೆ.20ರಂದು ನಡೆಯುವ ಪರೀಕ್ಷೆಯ ದಿನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫೆ.12ರಿಂದ 17ರ ನಡುವಿನ ಅವಧಿಯಲ್ಲಿ ಸಂಬಂಧಪಟ್ಟ ಕಾಲೇಜುಗಳಲ್ಲಿ ಆಶಾ ಅಥವಾ ಆರೋಗ್ಯ ಕಾರ್ಯಕರ್ತೆ ಯರಿಂದ ಮಾತ್ರೆಗಳನ್ನು ಪಡೆಯುವಂತೆ ಸಂಬಂಧಪಟ್ಟ ಎಲ್ಲಾ ಕಾಲೇಜುಗಳಿಗೆ ಮಾಹಿತಿ ನೀಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಂತುಹುಳು ನಿವಾರಣಾ ಮಾತ್ರೆ ವಿತರಣಾ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡುವಂತೆ ರೋಟರಿ ಮತ್ತು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಿಗೆ ಸಿಇಒ ತಿಳಿಸಿದರು.
ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂವಿತಾ, ಡಿಹೆಚ್‌ಓ ಡಾ. ರೋಹಿಣಿ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.