ವರ್ಷದ ಹಿಂದೆ ನಾಪತ್ತೆಯಾದ ಬಾಲಕ ಮುಂಬೈಯಲ್ಲಿ ಪತ್ತೆ
ಉಡುಪಿ, ಫೆ.5: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆದೂರು ಸ್ಪೂರ್ತಿ ಧಾಮ ಪುನರ್ವಸತಿ ಕೇಂದ್ರದಿಂದ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕನನ್ನು ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ಮುಂಬೈಯಲ್ಲಿ ಫೆ.4ರಂದು ಪತ್ತೆ ಹಚ್ಚಿದ್ದಾರೆ.
ಕೆದೂರು ಸ್ಪೂರ್ತಿಧಾಮದಲ್ಲಿ ಪುನರ್ವಸತಿಗಾಗಿ ದಾಖಲಿಸಲಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿ ಕಲ್ಪೇಶ(16) ಎಂಬಾತ 2017ರ ಫೆ.5ರಂದು ನಾಪತ್ತೆ ಯಾಗಿದ್ದನು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಉಡುಪಿ ಸೆನ್ ಪೊಲೀಸರು ಕಲ್ಪೇಶನನ್ನು ನವಿ ಮುಂಬೈಯಲ್ಲಿ ಪತ್ತೆಹಚ್ಚಿದ್ದಾರೆ.
ಸ್ಪೂರ್ತಿಧಾಮದಿಂದ ನಾಪತ್ತೆಯಾಗಿದ್ದ ಕಲ್ಪೇಶ್ ಮುಂಬೈಯಲ್ಲಿರುವ ತನ್ನ ಚಿಕ್ಕಮ್ಮ ಶೀತಲ್ ಎಂಬವರ ಮನೆಗೆ ಹೋಗಿದ್ದು, ಅಲ್ಲಿ ಅವರ ಮನೆಯಲ್ಲಿ ಉಳಿದು ಕೊಂಡು ಕೆಲಸಕ್ಕೆ ಹೋಗುತ್ತಿದ್ದನು. ಈ ಕುರಿತು ಮಾಹಿತಿ ಕಲೆ ಹಾಕಿ ಕಲ್ಪೇಶನನ್ನು ಪತ್ತೆ ಹಚ್ಚಿ ಉಡುಪಿಗೆ ಕರೆದುಕೊಂಡು ಬಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಆತನ ಒಪ್ಪಿಗೆಯಂತೆ ಆತನನ್ನು ಚಿಕ್ಕಮ್ಮ ಶೀತಲ್ ಅವರೊಂದಿಗೆ ಮುಂಬೈಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಸೆನ್ ಅಪರಾಧ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ತಿಳಿಸಿದ್ದಾರೆ.
ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಸೆನ್ ಅಪರಾಧ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಮತ್ತು ಸಿಬ್ಬಂದಿಗಳಾದ ಶ್ರೀಧರ್ ಶೆಟ್ಟಿಗಾರ್, ಸತೀಶ್, ಕೃಷ್ಣ ಪ್ರಸಾದ್, ರಾಘವೇಂದ್ರ, ಜೀವನ್ ಮತ್ತು ಶಿವಾನಂದ ಈ ಕಾರ್ಯಾಚರಣೆ ನಡೆಸಿದ್ದಾರೆ.