ಜಿಎಸ್‌ಟಿ ಮತ್ತು ಇತರ ವೈಫಲ್ಯಗಳ ಟೀಕೆಗಾಗಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ

Update: 2018-02-05 16:47 GMT

ಹೊಸದಿಲ್ಲಿ,ಫೆ.5: ಸೋಮವಾರ ರಾಜ್ಯಸಭೆಯಲ್ಲಿ ತನ್ನ ಚೊಚ್ಚಲ ಭಾಷಣವನ್ನು ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಜಿಎಸ್‌ಟಿ, ನಿರುದ್ಯೋಗವನ್ನು ತಡೆಯುವಲ್ಲಿ ವೈಫಲ್ಯ ಹಾಗೂ ಇತರ ವಿಷಯಗಳಿಗಾಗಿ ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದರು. ಇದೇ ವೇಳೆ ವಿವಿಧ ರಂಗಗಳಲ್ಲಿ ಸರಕಾರದ ಸಾಧನೆಗಳನ್ನು ಅವರು ಪಟ್ಟಿ ಮಾಡಿದರು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಚಾಲನೆ ನೀಡಿದ ಶಾ, ‘ಪಕೋಡಾ’ ವ್ಯಂಗ್ಯಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರನ್ನು ತರಾಟೆಗೆತ್ತಿಕೊಂಡರು. ಭಿಕ್ಷೆ ಬೇಡುವುದಕ್ಕಿಂತ ಪಕೋಡಾ ಮಾರಾಟ ಉತ್ತಮ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪಕೋಡಾ ಗಳನ್ನು ಮಾರಾಟ ಮಾಡುವುದೂ ಒಂದು ಉದ್ಯೋಗ ಎಂದು ಹೇಳಿದ್ದರು.

ಪಕೋಡಾ ಮಾರಾಟ ಒಂದು ಉದ್ಯೋಗವಾದರೆ ಭಿಕ್ಷೆ ಬೇಡುವುದೂ ಒಂದೂ ಉದ್ಯೋಗವಾಗುತ್ತದೆ ಎಂದು ಚಿದಂಬರಂ ಟೀಕಿಸಿದ್ದರು.

ಪಕೋಡಾಗಳನ್ನು ಮಾರುವವರು ಸ್ವ-ಉದ್ಯೋಗಿಗಳಾಗಿದ್ದಾರೆ. ನೀವು ಅವರನ್ನು ಭಿಕ್ಷುಕರಿಗೆ ಹೋಲಿಸಬಹುದೇ ಎಂದು ಪ್ರಶ್ನಿಸಿದ ಶಾ, ಚಹಾ ಮಾರಾಟಗಾರನೋರ್ವನ ಪುತ್ರ ಇಂದು ಈ ದೇಶದ ಪ್ರಧಾನಿಯಾಗಿದ್ದಾರೆ ಎಂದು ಬೆಟ್ಟು ಮಾಡಿದರು.

‘‘ದೇಶದಲ್ಲಿ ನಿರುದ್ಯೋಗವಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದೊಂದು ಸಮಸ್ಯೆಯಾಗಿದೆ. ಆದರೆ ನೀವು(ಕಾಂಗ್ರೆಸ್) ಅಷ್ಟೊಂದು ವರ್ಷಗಳ ಕಾಲ ದೇಶವನ್ನು ಆಳಿದ್ದೀರಿ. ನಾವು ಕೇವಲ ಎಂಟು ವರ್ಷಗಳ(ವಾಜಪೇಯಿ ಅವಧಿಯೂ ಸೇರಿ)ಕಾಲ ಅಧಿಕಾರದಲ್ಲಿದ್ದೇವೆ’’ ಎಂದು ತನ್ನ ಒಂದು ಗಂಟೆ ಅವಧಿಯ ಸುದೀರ್ಘ ಭಾಷಣದಲ್ಲಿ ಶಾ ಕುಟುಕಿದರು.

ಜಿಎಸ್‌ಟಿಯನ್ನು ವಿರೋಧಿಸುತ್ತಿರುವುದಕ್ಕಾಗಿ ಮತ್ತು ಅದನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಬಣ್ಣಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನೂ ಅವರು ತರಾಟೆಗೆತ್ತಿಕೊಂಡರು.

ಗಬ್ಬರ್ ಸಿಂಗ್ ಚಲನಚಿತ್ರದಲ್ಲಿ ಢಕಾಯಿತನ ಪಾತ್ರ ಹೆಸರಾಗಿತ್ತು ಎನ್ನುವುದನ್ನು ಬೆಟ್ಟು ಮಾಡಿದ ಶಾ, ಜಿಎಸ್‌ಟಿ ದರೋಡೆಯೇ?, ಇದನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಹೆಸರಿಸಿರುವವರು ಈ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ? ಇದು ದರೋಡೆಯಲ್ಲ, ಜಿಎಸ್‌ಟಿಯ ಆದಾಯವು ವಿಧವೆಯರು ಮತ್ತು ಬಡವರಿಗಾಗಿರುವ ವಿವಿಧ ಯೋಜನೆಗಳಿಗೆ ಸಬ್ಸಿಡಿ ನೀಡಲು ಬಳಕೆಯಾಗುತ್ತದೆ ಎಂದು ಹೇಳಿದರು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದಕ್ಕೆ ಒತ್ತು ನೀಡಿದ ಅವರು, ವಿದ್ಯುತ್ ಪೂರೈಕೆಯಿಂದ ಹಿಡಿದು ಶೌಚಾಲಯಗಳು, ಅಡುಗೆ ಅನಿಲ, ಉದ್ಯೋಗ ಸೃಷ್ಟಿ ಮತ್ತು ಜನರಿಗೆ ಆರೋಗ್ಯ ಸೌಲಭ್ಯಗಳವರೆಗೆ ಹಲವಾರು ಕ್ಷೇತ್ರಗಳಲ್ಲಿ ಸರಕಾರವು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News