×
Ad

ನೋಟು ರದ್ದತಿಯ ಪರಿಣಾಮ: ವಸತಿ ವಂಚನೆ ಪ್ರಕರಣದಲ್ಲಿ ಹೆಚ್ಚಳ

Update: 2018-02-05 22:32 IST

ಮುಂಬೈ, ಫೆ.5: ನೋಟು ರದ್ದತಿ ಹಾಗೂ ನಗದು ಬಿಕ್ಕಟ್ಟಿನ ಬಳಿಕ ಮುಂಬೈಯಲ್ಲಿ ವಸತಿ ವಂಚನೆ ಪ್ರಕರಣದಲ್ಲಿ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ವಂತ ಮನೆಯೊಂದನ್ನು ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ. ಇದಕ್ಕಾಗಿ ಕಷ್ಟಪಟ್ಟು ಕೂಡಿಸಿಟ್ಟ ಹಣವನ್ನು ಬಿಲ್ಡರ್‌ಗಳಿಗೆ ನೀಡಿ ಫ್ಲ್ಯಾಟ್ ಮುಂಗಡ ಕಾದಿರಿಸಿದವರಿಗೆ ಅತ್ತ ವಸತಿಯೂ ಇಲ್ಲ, ಇತ್ತ ವಸತಿಯೂ ಇಲ್ಲ ಎಂಬಂತಹ ಪ್ರಕರಣ ಹೆಚ್ಚಾಗಿದೆ. 2016ರಲ್ಲಿ ವಸತಿ ವಂಚನೆಯ 32 ಪ್ರಕರಣ ದಾಖಲಾಗಿದ್ದರೆ, 2017ರಲ್ಲಿ 50 ಪ್ರಕರಣಗಳನ್ನು ‘ಮಹಾರಾಷ್ಟ್ರ ಓನರ್‌ಶಿಪ್ ಫ್ಲಾಟ್’ ಕಾಯ್ದೆ(ಮೋಫಾ)ಯಡಿ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

 ಆರ್ಥಿಕ ಅಪರಾಧ ವಿಭಾಗ(ಇಒಡಬ್ಯ್ಲೂ)ದ ಅಧಿಕಾರಿಗಳ ಪ್ರಕಾರ, ಈ ಹೆಚ್ಚಳಕ್ಕೆ ನೋಟು ರದ್ದತಿ ಹಾಗೂ ಆ ಬಳಿಕ ಉಂಟಾದ ನಗದು ಬಿಕ್ಕಟ್ಟು ಕಾರಣವಾಗಿದೆ. ನಗದು ಬಿಕ್ಕಟ್ಟಿನ ಪರಿಣಾಮ ಸಣ್ಣ ಹಾಗೂ ಮಧ್ಯಮ ವರ್ಗದ ಕಟ್ಟಡ ನಿರ್ಮಾಣಗಾರರು (ಬಿಲ್ಡರ್ಸ್) ತಮ್ಮ ವಸತಿ ಯೋಜನೆಯನ್ನು ನಿಗದಿತ ಕಾಲದಲ್ಲಿ ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಇದರಿಂದ ಗ್ರಾಹಕರಿಗೆ ನಿಗದಿತ ದಿನದಂದು ವಸತಿ ಹಸ್ತಾಂತರಿಸಲು ಅಸಾಧ್ಯವಾಗಿದೆ ಎಂದು ಇಒಡಬ್ಲ್ಯೂಅಧಿಕಾರಿಗಳು ತಿಳಿಸಿದ್ದಾರೆ.

ಕೆಲವೊಂದು ಸಂದರ್ಭದಲ್ಲಿ ಗ್ರಾಹಕರಿಂದ ಮುಂಗಡ ಹಣ ಪಡೆದು ಆ ಹಣವನ್ನು ಮತ್ತೊಂದು ಪ್ರಾಜೆಕ್ಟ್‌ನಲ್ಲಿ ತೊಡಗಿಸಲಾಗುತ್ತದೆ. ಒಂದು ಪ್ರಾಜೆಕ್ಟ್‌ಗೆ ಅಡೆತಡೆಯಾದರೆ ಮತ್ತೊಂದು ಪ್ರಾಜೆಕ್ಟ್‌ಗೂ ತೊಂದರೆಯಾಗುತ್ತದೆ. ವಸತಿಗಾಗಿ ಮುಂಗಡ ಪಾವತಿಯಾದ ಹಣವನ್ನು ವಸತಿ ಯೋಜನೆಯಲ್ಲಿ ತೊಡಗಿಸದೆ ಅನ್ಯ ಯೋಜನೆಯಲ್ಲಿ ವಿನಿಯೋಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಈ ಹಿಂದೆ ಕೆಲವು ಪ್ರಕರಣಗಳಷ್ಟೇ ಎಫ್‌ಐಆರ್ ದಾಖಲಿಸುವ ಹಂತಕ್ಕೆ ಹೋಗುತ್ತಿತ್ತು. ಬಹುತೇಕ ಪ್ರಕರಣಗಳಲ್ಲಿ ಬಿಲ್ಡರ್‌ಗಳು ಲಾಬಿ ನಡೆಸಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದರು. ಈಗ ಈ ಪದ್ದತಿಗೆ ‘ಮೋಫಾ’ ತಡೆಹಾಕಿದೆ. ಅಲ್ಲದೆ ವಸತಿ ಖರೀದಿಸಲು ಮುಂದಾಗುವ ಗ್ರಾಹಕರು ತಮ್ಮ ಹಕ್ಕನ್ನು ತಿಳಿದುಕೊಳ್ಳಬೇಕು ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ದೀಕ್ಷಿತ್ ತಿಳಿಸಿದ್ದಾರೆ.

‘ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ’ಯ ಪರಿಣಾಮಕಾರಿ ಹಾಗೂ ಪಾರದರ್ಶಕ ಕ್ರಮಗಳಿಂದಾಗಿ ಮುಂದಿನ ದಿನದಲ್ಲಿ ವಸತಿ ಯೋಜನೆಯ ವಂಚನೆ ಪ್ರಕರಣ ಗಮನಾರ್ಹವಾಗಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News