ಅಮಾಯಕರ ವಿರುದ್ಧ ತೆರೆಯಲಾಗಿರುವ ರೌಡಿ ಶೀಟ್ ತೆರವುಗೊಳಿಸುವಂತೆ ಮನವಿ
ಮಂಗಳೂರು, ಫೆ. 5: ಸ್ಥಳೀಯವಾಗಿ ಪೊಲೀಸರು ರೌಡಿ ಪಟ್ಟಿ ತಯಾರಿಸುವಾಗ ಯಾವುದೇ ಕ್ರಿಮಿನಲ್ ಉದ್ದೇಶಗಳಿಲ್ಲದೆ ಸಂದರ್ಭದ ಬಲಿಪಶುಗಳಾಗಿ ಕೇವಲ ಒಂದು ಕ್ರಿಮಿನಲ್ ಪ್ರಕರಣವನ್ನು ಹೊಂದಿದವರು, ಗುಂಪು ಘರ್ಷಣೆಗಳ ಸಂದರ್ಭ ಗುಂಪಿನಲ್ಲಿ ತಪ್ಪು ಗುರುತಿಸುವಿಕೆಯಿಂದ ಬಂಧಿಸಲ್ಪಟ್ಟವರು, ಜನಪರ ಹೋರಾಟದ ಕಾರಣಕ್ಕೆ ಮೊಕದ್ದಮೆ ಎದುರಿಸುವವರನ್ನು ರೌಡಿ ಪಟ್ಟಿಗೆ ಸೇರಿಸಿರುವ ಕೆಲವು ತಪ್ಪುಗಳು ನಡೆದಿದೆ, ಅಮಾಯಕರ ವಿರುದ್ಧ ತೆರೆಯಲಾಗಿರುವ ರೌಡಿ ಶೀಟ್ ತೆರವುಗೊಳಿಸುವಂತೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.
ಕಮೀಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆ, ರೌಡಿ ಗ್ಯಾಂಗ್ ಗಳ ಉಪಟಳ, ಕೋಮು ಸಂಘರ್ಷಗಳನ್ನು ಮಟ್ಟ ಹಾಕಲು ತಾವು ಅಪಾರವಾಗಿ ಶ್ರಮಿಸುತ್ತಿದ್ದೀರಿ. ಆ ಹಿನ್ನಲೆಯಲ್ಲಿ, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದವರ ಮೇಲೆ ಹೊಸದಾಗಿ ರೌಡಿ ಶೀಟ್ ತೆರೆಯುವುದು, ಈ ಹಿಂದೆ ರೌಡಿ ಶೀಟ್ ಹೊಂದಿರುವ ಕ್ರಿಮಿನಲ್ ಗಳ ಮೇಲೆ ನಿರಂತರ ನಿಗಾ ಇಡುವುದು ಮಾಡುತ್ತಿದ್ದೀರಿ. ಇದು ಮಂಗಳೂರಿನ ಸದ್ಯದ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮವೂ ಹೌದು. ನಾವು ನಿಮ್ಮ ಇಂತಹ ಕಾಳಜಿಯ ಕೆಲಸವನ್ನು ಬೆಂಬಲಿಸುತ್ತೇವೆ. ಅದೇ ಸಂದರ್ಭ, ಸ್ಥಳೀಯವಾಗಿ ಪೊಲೀಸರು ರೌಡಿ ಪಟ್ಟಿ ತಯಾರಿಸುವಾಗ ಯಾವುದೇ ಕ್ರಿಮಿನಲ್ ಉದ್ದೇಶಗಳಿಲ್ಲದೆ ಸಂದರ್ಭದ ಬಲಿಪಶುಗಳಾಗಿ ಕೇವಲ ಒಂದು ಕ್ರಿಮಿನಲ್ ಪ್ರಕರಣವನ್ನು ಹೊಂದಿದವರು, ಗುಂಪು ಘರ್ಷಣೆಗಳ ಸಂದರ್ಭ ಗುಂಪಿನಲ್ಲಿ ತಪ್ಪು ಗುರುತಿಸುವಿಕೆಯಿಂದ ಬಂಧಿಸಲ್ಪಟ್ಟವರು, ಜನಪರ ಹೋರಾಟದ ಕಾರಣಕ್ಕೆ ಮೊಕದ್ದಮೆ ಎದುರಿಸುವವರನ್ನು ರೌಡಿ ಪಟ್ಟಿಗೆ ಸೇರಿಸಿರುವ ಕೆಲವು ತಪ್ಪುಗಳು ನಡೆದಿದೆ. ಅದೆಲ್ಲಕ್ಕಿಂತಲೂ, ಹತ್ತು ವರ್ಷ, ಕೆಲವೆಡೆ ಇಪ್ಪತ್ತು ವರ್ಷಗಳ ಹಿಂದೆ ಸಂದರ್ಭದ ಬಲಿಪಶುಗಳಾಗಿಯೋ, ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವಹಿಸಿದ ಕಾರಣಕ್ಕೊ ರೌಡಿಪಟ್ಟಿಗೆ ಸೇರ್ಪಡೆಗೊಂಡಿ ದ್ದಾರೆ. ಅವರಲ್ಲಿ ಬಹುತೇಕರು ಆ ನಂತರ ಹತ್ತಾರು ವರ್ಷಗಳ ಕಾಲ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸದೆ ಸಭ್ಯ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಈ ರೀತಿ ರೌಡಿ ಪಟ್ಟಿಯಲ್ಲಿ ಇರುವವರು ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಒಂದು ಅಂದಾಜು. ಇದರಲ್ಲಿ ಬಹುತೇಕರು ಈಗ ನಲವತ್ತು, ಐವತ್ತು ವರ್ಷ ದಾಟಿದವರಾಗಿದ್ದು. ತಮ್ಮಷ್ಟಕ್ಕೆ ದುಡಿದು ಕುಟುಂಬ ಸಾಕುವವರಾಗಿದ್ದಾರೆ. ಇಂತವರ ಮೇಲೆ ರೌಡಿ ಶೀಟ್ ಇರುವುದರಿಂದ ಪೊಲೀಸರು ಇವರನ್ನು ಪದೇ ಪದೆ ಠಾಣೆಗೆ ಕರೆಯುವುದು, ಮುಚ್ಚಳಿಕೆ ಬರೆಸುವುದು, ಶಾಂತಿ ಭಂಗದ ಕೇಸು ದಾಖಲಿಸುವುದು ಸಹಜವಾಗಿ ನಡೆಯುತ್ತಿದೆ. ಇದರಿಂದ ಈಗ ಮಧ್ಯ ವಯಸ್ಕರಾಗಿ ಸಭ್ಯ ಜೀವನ ನಡೆಸುವ ಇಂತವರು ಮಾನಸಿಕ ತೊಂದರೆ, ದುಡಿಮೆಯ ಮೇಲೆ ಗಮನ ಹರಿಸಲಾಗದ ಸ್ಥಿತಿ ಎದುರಿಸುತ್ತಾರೆ. ಇದು ಇವರ ಕುಟುಂಬಗಳ ಮೇಲೂ ಪರಿಣಾಮ ಬೀರುತ್ತದೆ. ಅದಲ್ಲದೆ, ಪೊಲೀಸರು ಅನಗತ್ಯವಾಗಿ ಇಂತವರ ಮೇಲೆ ನಿಗಾ ಇಡುವುದರಿಂದ ಪೊಲೀಸ್ ಇಲಾಖೆಯ ಶ್ರಮ, ಸಮಯ, ಸಂಪನ್ಮೂಲವೂ ಪೋಲಾಗುತ್ತದೆ. ಹಾಗೂ ನಿಜವಾದ ಕ್ರಿಮಿನಲ್ ಗಳು, ರೌಡಿಗಳು ಇದರ ಲಾಭವನ್ನು ಪಡೆಯುತ್ತಾರೆ. ಈ ಎಲ್ಲಾ ಅಂಶಗಳನ್ನು ನ್ಯಾಯಪರರಾದ ತಾವುಗಳು ಸಹಾನುಭೂತಿಯಿಂದ ಪರಿಶೀಲಿಸಿ, ಯಾವುದೇ ರೌಡಿ ಹಿನ್ನಲೆ ಇಲ್ಲದೆ, ರೌಡಿ ಪಟ್ಟಿಯಲ್ಲಿ ಸೇರಿ ಕೊಂಡಿರುವ ಅಮಾಯಕರು, ಈಗ ಸಭ್ಯ ಜೀವನ ನಡೆಸುವ, ನಾಗರಿಕ ಸಮಾಜದಲ್ಲಿ ಒಳಗೊಳ್ಳಲು ಬಯಸುವ, ಐದು, ಹತ್ತು ವರ್ಷಗಳಿಂದ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವಹಿಸದವರನ್ನು ರೌಡಿ ಪಟ್ಟಿಯಿಂದ ಕೈ ಬಿಡಬೇಕು, ಸಭ್ಯ ನಾಗರಿಕರಾಗಿ ನೆಮ್ಮದಿಯ ಜೀವನ ನಡೆಸಲು ಅನವು ಮಾಡಿಕೊಡಬೇಕು, ಕಾನೂನು ಪಾಲನೆಯ ವಿಚಾರದಲ್ಲಿ ಮಾನವೀಯವಾಗಿ ಯೋಚಿಸುವ ತಾವು ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ರೌಡಿ ಪಟ್ಟಿಯನ್ನು ಪರಿಶೀಲನೆ ನಡೆಸಿ ಅಮಾಯಕರ ಬದುಕಿಗೆ ನೆಮ್ಮದಿ ಒದಗಿಸಿ ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.