×
Ad

ಬಡವರಿಗೆ ಸಹಾಯ ಔದಾರ್ಯ ಅಲ್ಲ, ಅದು ನಮ್ಮ ಜವಾಬ್ದಾರಿ: ರಫೀಕ್ ಮಾಸ್ಟರ್

Update: 2018-02-06 16:28 IST

ಉಪ್ಪಿನಂಗಡಿ, ಫೆ. 6: ನಾವುಗಳು ಬಡವರಿಗೆ ಮಾಡುವ ಸಹಾಯ, ಸಹಕಾರವನ್ನು ಔದಾರ್ಯ ಎಂದು ತಿಳಿಯಬಾರದು, ಅದು ನಮ್ಮ ಜವಾಬ್ದಾರಿ ಆಗಿರುತ್ತದೆ, ಸಹಾಯ ಮಾಡಿದವರಿಗೆ ದೇವರು ಎಂದೂ ಕಡಿಮೆ ಮಾಡುವುದಿಲ್ಲ ಎಂದು ಮಂಗಳೂರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಗೌರವ ಸಲಹೆಗಾರ ಹಾಜಿ ಕೆ. ರಫೀಕ್ ಮಾಸ್ಟರ್ ಹೇಳಿದರು.

ಅವರು ರವಿವಾರ ನಡೆದ 'ಆತೂರು ಹಫ್ವಾ ಕುಟುಂಬ ಸಮ್ಮಿಳನ-2018' ಕಾರ್ಯಕ್ರಮದಲ್ಲಿ ಮಾತನಾಡಿದರು. ಇಸ್ಲಾಂನ ಜಿಹಾದ್ ಅನ್ನು ಭಯೋತ್ಪಾದನೆ ಎಂದೆಲ್ಲಾ ಬಣ್ಣಿಸುತ್ತಾರೆ, ಆದರೆ ಇಸ್ಲಾಂ ಕಲಿಸಿಕೊಟ್ಟಿರುವ ಜಿಹಾದ್ ಎಂದರೆ ಬಡವರು, ನಿರ್ಗತಿಕರು, ಅನಾಥರು, ಅಸಹಾಯಕರಿಗೆ ಸಹಾಯ ಮಾಡುವಂತದ್ದು ಆಗಿರುತ್ತದೆ ಎಂದ ಅವರು ಇಂತಹವರ ಸೇವೆಯನ್ನು ಜಿಹಾದ್ ರೀತಿಯಲ್ಲಿ ಮಾಡಬೇಕು, ಆ ರೀತಿ ಕೊಟ್ಟ ಸೇವೆಯ ಪ್ರತಿಫಲವಾಗಿ ಅಲ್ಲಾಹು ನಮಗೆ ಸ್ವರ್ಗಕ್ಕೆ ದಾರಿ ತೋರಿಸುತ್ತಾನೆ, ಈ ನಿಟ್ಟಿನಲ್ಲಿ ಹಫ್ವಾ ಕುಟುಂಬದವರ ಸೇವೆ ಮಾದರಿ ಆಗಿದ್ದು, ತನ್ಮೂಲಕ ಕಲಿಯುವ ಯುವಕರಿಗೆ ಶಿಕ್ಷಣಕ್ಕೆ ಸಹಾಯ ಮಾಡುವುದು ಉತ್ತಮ ಸೇವೆ ಎಂದರು.

ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಮಹಮ್ಮದ್ ಆಲಿ ಮಾತನಾಡಿ ಹಫ್ವಾ ಕುಟುಂಬ ತನ್ನ ಕುಟುಂಬದ ಸದಸ್ಯರನ್ನು ಒಂದುಗೂಡಿಸುವ ಮೂಲಕ ಸಮುದಾಯದಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದು ಮತ್ತು ಅಸಹಾಯಕರಿಗೆ ಸಹಾಯ ಮಾಡುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿ ಆಗುತ್ತಿದೆ, ಇದು ಮಾದರಿ ಕಾರ್ಯಕ್ರಮ ಆಗಿದೆ ಎಂದರು.

ಹಫ್ವಾ ಸಮಿತಿ ಅಧ್ಯಕ್ಷ ಎನ್. ಇಬ್ರಾಹಿಂ ಜೇಡರಪೇಟೆ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಗೌರವಾಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ದುವಾಃ ನೆರವೇರಿಸಿದರು. ಡಿ.ಎ. ಹಂಝ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನೀಫ್ ಫೈಝಿ ಪಜೀರು, ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ನಾಸಿರ್ ಹೊಸಮನೆ, ನೌಶಾದ್ ಸಂದರ್ಭೋಚಿತವಾಗಿ ಮಾತನಾಡಿದರು.

ಸಮಾರಂಭದಲ್ಲಿ ಹಫ್ವಾ ಸಮಿತಿಯ ಗೌರವ ಸಲಹೆಗಾರ ಎ.ಎಂ. ಅಬೂಬಕರ್ ಹಾಜಿ, ಆತೂರು ಬದ್ರಿಯಾ ಮಸೀದಿ ಮಾಜಿ ಅಧ್ಯಕ್ಷ ಬಿ.ಕೆ. ಮಹಮ್ಮದ್ ಕುಂಡಾಜೆ, ಹಾಜಿ ಅಬೂಬಕ್ಕರ್ ಮದನಿ ಬೇನಪ್ಪು, ಎ.ಎಸ್. ಹಸೈನಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭ

ಬೆಳಗ್ಗೆ ಕೆಮ್ಮಾರ ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಇಲ್ಯಾಸ್ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ದುವಾಃ ನೆರವೇರಿಸಿದರು. ಕುಂಬ್ರ ಮಹಿಳಾ ಶರೀಅತ್ ಕಾಲೇಜು ಪ್ರಾಚಾರ್ಯ ಹಂಝ ಮದನಿ ಮಿತ್ತೂರು ಕುಟುಂಬ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು.

ಬೆಳಿಗ್ಗಿನಿಂದ ಸಂಜೆಯ ತನಕ ವಿವಿಧ ಸ್ಪರ್ಧೆಗಳು, ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ಆತೂರು ವಿದ್ಯಾಭಾರತಿ ವಿದ್ಯಾ ಸಂಸ್ಥೆಯ ಸಂಚಾಲಕ ಬಿ.ಎಸ್. ಅಬ್ದುಲ್ ಖಾದರ್ ಸ್ವಾಗತಿಸಿ, ಮಾಣಿ ದಾರುಲ್ ಇರ್ಷಾದ್ ಶಾಲೆಯ ಪ್ರಾಧ್ಯಾಪಕ ನೌಫಲ್ ಮಾಸ್ಟರ್ ವಂದಿಸಿದರು. ಉಮರ್ ಪಿಲಿಕುಡೇಲ್, ಅಬ್ದುಲ್ ನಾಸಿರ್ ಸಮರಗುಂಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News