ನಿವೇಶನ, ಆಸ್ತಿ ಮಾಲಕತ್ವಕ್ಕಾಗಿ ಜೆಪ್ಪು ಕಂಪೌಂಡ್ ನಿವಾಸಿಗಳ ಒತ್ತಾಯ
ಮಂಗಳೂರು, ಫೆ. 5: ಜೆಪ್ಪು ಕಂಪೌಂಡ್‌ನಲ್ಲಿರುವ 270 ಮನೆಗಳ ನಿವಾಸಿಗಳು 130 ವರ್ಷಗಳಿಂದ ತಮ್ಮ ಹಿರಿಯರ ಕಾಲದಿಂದಲೂ ಅಲ್ಲಿ ವಾಸವಾಗಿದ್ದು, ಇದೀಗ ತಮ್ಮ ನಿವೇಶನ ಮತ್ತು ಆಸ್ತಿಯ ಮಾಲಕತ್ವ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾತನಾಡಿದ ಜೆಪ್ಪು ಕಂಪೌಂಡ್‌ನ ಹಳೆ ನಿವಾಸಿ, ಎರಿಕ್ ಒಝಾರಿಯೊ, ಜೆಪ್ಪು ಕಂಪೌಂಡ್‌ನ ನಿವಾಸಿಗಳ ಸಮಸ್ಯೆಯನ್ನು ಬಗೆಹರಿಸಲು ಫೆ. 12ರಂದು ಸಂಜೆ 6.30ಕ್ಕೆ ಜೆಪ್ಪು ಕ್ಲಬ್‌ನಲ್ಲಿ ಸ್ಥಳೀಯ ಶಾಸಕರ ಸಭೆಯನ್ನು ಕರೆಯಲಾಗಿದೆ. ಶಾಸಕರು ತಮ್ಮ ಮನವಿಯನ್ನು ಪುರಸ್ಕರಿಸಿ ನ್ಯಾಯ ಒದಗಿಸುತ್ತಾರೆಂಬ ಭರವಸೆ ಇದೆ. ನಾಯ ಸಿಗದಿದ್ದರೆ ಮುಂಬರುವ ಚುನಾವಣೆಯಲ್ಲಿ ತಮ್ಮ ಬೆಂಬಲ ನೀಡುವುದಿಲ್ಲ ಎಂದು ನೇರವಾಗಿ ಅವರಿಗೆ ತಿಳಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಜೆಪ್ಪು ಪ್ರದೇಶದಲ್ಲಿ ವಾಸವಾಗಿದ್ದ ನಮ್ಮ ಪೂರ್ವಜರು ಹಿಂದೂಗಳಾಗಿದ್ದು, ಕ್ರೈಸ್ತ ಧರ್ಮಕ್ಕೆ ಅವರನ್ನು ಉದ್ಯೋಗ, ವಾಸಸ್ಥಳದ ಆಮಿಷದೊಂದಿಗೆ ಮತಾಂತರಗೊಳಿಸಲಾಗಿತ್ತು. ಆದರೆ ಇದೀಗ ಆ ಜೆಪ್ಪು ಕಂಪೌಂಡ್‌ನಲ್ಲಿರುವ ನಿವಾಸಿಗಳಿಗೆ ಅವರು ವಾಸವಾಗಿದ್ದ ಸ್ಥಳದ ಹಕ್ಕು ಇಲ್ಲವೆಂದು ಹೇಳಿ ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತಿದೆ. ಇದನ್ನು ವಿರೋಧಿಸಿ ಈಗಾಗಲೇ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್‌ಗೆ ಬಹಿರಂಗ ಪತ್ರವೊಂದನ್ನು ಬರೆಯಲಾಗಿದೆ. ನಾವು ನಮ್ಮ ಪೂರ್ವಜರ ಕಾಲದಿಂದ ಹೊಂದಿದ್ದ ಜಮೀನಿನ ಮಾಲಕತ್ವವನ್ನು ಇದೀಗ ಮಂಗಳೂರು ಧರ್ಮ ಪ್ರಾಂತ್ಯದ್ದು ಎಂದು ಹೇಳಿಕೊಂಡು ಜಾಗವನ್ನು ಹೊರಗಿನವರಿಗೆ ಮಾರಾಟ ಮಾಡಿ, ಕಮರ್ಶಿಯಲ್ ಕಾಂಪ್ಲೆಕ್ಸ್ ಹಾಗೂ ಅಪಾರ್ಟ್‌ಮೆಂಟ್ ನಿರ್ಮಿಸಲಾಗುಗತ್ತಿದೆ. ಈ ಬಗ್ಗೆ ಮಾಹಿತಿಯನ್ನು ಪಡೆದು ಆಕ್ಷೇಪಿಸಿದ ಇಬ್ಬರು ಆರ್‌ಟಿಐ ಕಾರ್ಯಕರ್ತರಿಗೆ ಜೆಪ್ಪು ಕಂಪೌಂಡಿನಿಂದ ಕ್ವಿಟ್ ನೋಟೀಸು ನೀಡಲಾಗಿದೆ. ಈ ನೋಟೀಸನ್ನು ಹಿಂಪಡೆದು, ಗುಲಾಮಗಿರಿಯಿಂದ ಇಲ್ಲಿನ ನಿವಾಸಿಗಳನ್ನು ಸ್ವತಂತ್ರರಾಗಿಸಬೇಕು. ಜಪ್ಪು ಕಂಪೌಂಡ್‌ನಲ್ಲಿ ಲೀಸ್, ಬಾಡಿಗೆ ಮಾರಾಟ ಮಾಡುವುದಿದ್ದರೆ ಅಥವಾ ಯಾವುದೇ ರೀತಿಯ ಅಭಿವೃದ್ಧಿಯಲ್ಲಿ ಇಲ್ಲಿನ ನಿವಾಸಿಗಳನ್ನು ಪಾಲುದಾರರನ್ನಾಗಿಸಬೇಕು . ಮಾತ್ರವಲ್ಲದೆ ಇಲ್ಲಿನ ನಿವಾಸಿಗಳು ಸಹಿಸಿದ ನೋವು, ವೇದನೆಗಳಿಗೆ ಪರಿಹಾರವನ್ನು ಒದಗಿಸಬೇಕು ಎಂದು ಬಿಷಪರಿಗೆ ನೀಡಲಾದ ಬಹಿರಂಗ ಪತ್ರದಲ್ಲಿ ಒತ್ತಾಯಿಸಲಾಗಿದೆ. ನಮಗೆ ನೆಮ್ಮದಿ ಸಿಗದಿದ್ದಲ್ಲಿ ನಾವು ನಮ್ಮ ಮಾತೃಧರ್ಮಕ್ಕೆ ಹಿಂತಿರುಗುವುದು ಕೂಡಾ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಗೋಷ್ಠಿಯಲ್ಲಿ ಜೆಪ್ಪು ಪ್ಯಾರಿಷನರ್ಸ್ ಅಸೋಸಿಯೇಶನ್ ಪರವಾಗಿ ಅಧ್ಯಕ್ಷ ವಿಲ್ಸನ್ ಬ್ಯಾಪ್ಟಿಸ್ಟ್, ಕಾರ್ಯದರ್ಶಿ ಸತೀಶ್ ಫೊನ್ಸೆಕಾ, ಆರ್‌ಟಿಐ ಕಾರ್ಯಕರ್ತ ವಲೇರಿಯನಂ ಟೆಕ್ಸೇರಾ, ವಿಕ್ಟರ್ ಪಾಯ್ಸ ಉಪಸ್ಥಿತರಿದ್ದರು.