ಅಜೆಕಾರು: ಪತ್ನಿಯ ಕೈ, ಕಾಲು ಕಡಿದು ಕೊಲೆಯತ್ನ; ಆರೋಪಿ ಬಂಧನ
ಕಾರ್ಕಳ, ಫೆ. 6: ಅಜೆಕಾರು ಸಮೀಪದ ಹೆರ್ಮುಂಡೆ ಎಂಬಲ್ಲಿ ಪತ್ನಿಯ ಕೈ ಮತ್ತು ಕಾಲುಗಳನ್ನು ಕತ್ತಿಯಿಂದ ಕ್ರೂರವಾಗಿ ಕಡಿದು ಕೊಲೆಗೆ ಯತ್ನಿಸಿ, ತಲೆಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಉಡುಪಿ ಡಿಸಿಐಬಿ ಪೊಲೀಸರು ಮಂಗಳವಾರ ಭಟ್ಕಳ ರೈಲು ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಹೆರ್ಮುಂಡೆ ಗ್ರಾಮದ ಪಬ್ಬರ್ಬೆಟ್ಟು ನಿವಾಸಿ ಸಂತೋಷ ಪೂಜಾರಿ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಆತನ ಪತ್ನಿ ಅದೇ ಗ್ರಾಮದ ಕರ್ಜಿಪಲ್ಕೆಯ ಶ್ರೀಧರ್ ಪೂಜಾರಿ ಮತ್ತು ಸುಗುಣ ದಂಪತಿಯ ಪುತ್ರಿ ಅನುಶ್ರೀ (23) ಕಳೆದ 10 ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನುಶ್ರೀ ತನ್ನ ಸಂಬಂಧಿ ಸಂತೋಷ ಪೂಜಾರಿಯನ್ನು 2017ರ ಜ.6ರಂದು ವಿವಾಹವಾಗಿದ್ದು, ಬಳಿಕ ಆಕೆ ತನ್ನ ಗಂಡನ ಜೊತೆಯಲ್ಲಿ ಮುಂಬೈಯ ಮೀರಾ ರೋಡ್ ಎಂಬಲ್ಲಿ ವಾಸವಾಗಿದ್ದರು. ಆ ವೇಳೆ ಸಂತೋಷ್ ಪೂಜಾರಿ ಮದ್ಯ ಸೇವಿಸಿ ಬಂದು ಮನೆಯ ಸಾಮಾನುಗಳನ್ನು ಹೊರಗೆ ಬಿಸಾಡಿ, ದೈಹಿಕ ಹಾಗೂ ಮಾನಸಿಕ ತೊಂದರೆ ನೀಡುತ್ತಿದ್ದ ಎನ್ನಲಾಗಿದೆ.
ಇದರಿಂದ ಬೇಸತ್ತ ಅನುಶ್ರೀ ತನ್ನ ತವರು ಮನೆಯಲ್ಲಿ ಬಂದು ನೆಲೆಸಿದ್ದರು. ಅಲ್ಲದೆ ಕಾರ್ಕಳದ ಗ್ರಾನೈಟ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಜ.27ರಂದು ಸಂಜೆ 5:45ರ ಸುಮಾರಿಗೆ ಅನುಶ್ರೀ ಕೆಲಸ ಬಿಟ್ಟು ಮನೆಗೆ ಜಾರ್ಕಳ ಮುಂಡ್ಲಿ ಗ್ರಾಮದ ಸ್ವರ್ಣ ನದಿ ದಾಟಿ ಕಾಲುದಾರಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಸಂತೋಷ್ ಪೂಜಾರಿ ಆಕೆಯ ಕಾಲು, ಕೈಗಳನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದನು.
ಬಂಧಿತ ಆರೋಪಿಯನ್ನು ಡಿಸಿಐಬಿ ಪೊಲೀಸರು ಮುಂದಿನ ಕ್ರಮಕ್ಕೆ ಅಜೆಕಾರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮತ್ತು ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನವಣೆ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಡಿಸಿಐಬಿ ಎಎಸ್ಸೈ ರವಿಚಂದ್ರ ಹಾಗೂ ಸಿಬ್ಬಂದಿಗಳಾದ ಸಂತೋಷ ಕುಂದರ್, ರಾಮು ಹೆಗ್ಡೆ, ಸುರೇಶ, ಚಂದ್ರ ಶೆಟ್ಟಿ, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.